Share News

ಬಂಗಾರಪೇಟೆ/ಕೆ.ಜಿ.ಎಫ್: ಕೆ.ಜಿ.ಎಫ್ ಪೊಲೀಸ್ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಾಡಬಂದೂಕುಗಳನ್ನು ಬಳಸಿ ಕಾಡುಪ್ರಾಣಿಗಳ ಬೇಟೆಗೆ ಯತ್ನಿಸುತ್ತಿದ್ದ ಹಾಗೂ ಅನುಮತಿಯಿಲ್ಲದೆ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ಕುಖ್ಯಾತ ಜಾಲವನ್ನು ಕಾಮಸಮುದ್ರಂ ಮತ್ತು ಬೂದಿಕೋಟೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಚಾಲ್ತಿಯಲ್ಲಿದ್ದ 3 ನಾಡಬಂದೂಕುಗಳು, ತಯಾರಿಕಾ ಸಾಮಗ್ರಿಗಳು ಹಾಗೂ ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು ಐವರು ಆರೋಪಿಗಳನ್ನು ಬಂಧಿಸಲಾಗಿದೆ.

​ಕಾಡುಪ್ರಾಣಿ ಬೇಟೆಗೆ ಯತ್ನಿಸುತ್ತಿದ್ದವರ ಬಂಧನ:

​ಅಕ್ಟೋಬರ್ 21ರಂದು ಮುಂಜಾನೆ ಸುಮಾರು 6:20ರ ಸುಮಾರಿಗೆ ಕಾಮಸಮುದ್ರಂ ಸರಹದ್ದಿನ ಬಲಮಂದೆ ರಸ್ತೆ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಕೆಲವರು ಬಂದೂಕುಗಳೊಂದಿಗೆ ಕಾಡುಪ್ರಾಣಿಗಳ ಬೇಟೆಗೆ ಸಂಚು ಹೂಡಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಕೂಡಲೇ ಎಚ್ಚೆತ್ತ ಜಿಲ್ಲಾ ಪೊಲೀಸ್ ಕಚೇರಿಯ ವಿಶೇಷ ತಂಡ ಸ್ಥಳಕ್ಕೆ ದಾಳಿ ನಡೆಸಿ, ಗರುಡಕಂಪನಹಳ್ಳಿಯ ನಿವಾಸಿಗಳಾದ ಬಾಲಾಜಿ, ಚಂದ್ರಪ್ಪ, ಚಂದ್ರಶೇಖರ, ಉಮಾಪತಿ ಹಾಗೂ ವೆಂಕಟಪ್ಪ ಎಂಬ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದೆ.

​ಆರೋಪಿಗಳಿಂದ 3 ನಾಡಬಂದೂಕುಗಳು, ಗನ್ ಪೌಡರ್, ಸೀಸದ ಗುಂಡುಗಳು, ಖಾಲಿ ಶೆಲ್‌ಗಳು ಹಾಗೂ ಬೇಟೆಗೆ ಬಳಸುತ್ತಿದ್ದ ಇತರೆ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಆರ್ಮ್ಸ್ ಆಕ್ಟ್ (ಶಸ್ತ್ರಾಸ್ತ್ರ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

​ಅಕ್ರಮ ಬಂದೂಕು ತಯಾರಿಕಾ ಘಟಕದ ಮೇಲೂ ದಾಳಿ:

​ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ, ಬೂದಿಕೋಟೆ ಠಾಣಾ ವ್ಯಾಪ್ತಿಯ ಫಲಮಡುಗು ಗ್ರಾಮದಲ್ಲಿ ಪ್ರಕಾಶ್ ಆರ್. ಹಾಗೂ ರಾಜಾಚಾರಿ ಎಂಬುವವರು ಅಕ್ರಮವಾಗಿ ಬಂದೂಕುಗಳನ್ನು ತಯಾರಿಸಿ, ದುರಸ್ತಿ ಮಾಡಿ ಮಾರಾಟ ಮಾಡುತ್ತಿರುವ ರಹಸ್ಯ ಬಯಲಾಗಿದೆ. ಈ ಸುಳಿವಿನ ಬೆನ್ನೇರಿದ ಪೊಲೀಸರು ದಾಳಿ ನಡೆಸಿ ಆರೋಪಿ ಪ್ರಕಾಶ್ ಆರ್. ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಮರದಿಂದ ತಯಾರಿಸಿದ 5 ಬಂದೂಕಿನ ಬಾಡಿಗಳು, 24 ಸಿಂಗಲ್ ಬ್ಯಾರೆಲ್ ಕಬ್ಬಿಣದ ಪೈಪ್‌ಗಳು ಹಾಗೂ 6 ಕಬ್ಬಿಣದ ಸಲಾಕೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ.

​ಪೊಲೀಸ್ ಸಿಬ್ಬಂದಿಗೆ ಪ್ರಶಂಸೆ:

​ನಿಖರ ಮಾಹಿತಿ ಸಂಗ್ರಹಿಸಿ ಅಕ್ರಮ ಶಸ್ತ್ರಾಸ್ತ್ರ ಹಾಗೂ ಬೇಟೆಗಾರರ ಜಾಲವನ್ನು ಬೇಧಿಸುವಲ್ಲಿ ಯಶಸ್ವಿಯಾದ ವಿಶೇಷ ತಂಡದ ಸಿಬ್ಬಂದಿಯಾದ ಮಹೇಂದ್ರ, ಮಂಜುನಾಥ್ ಹಾಗೂ ಡಿ.ಎ.ಆರ್ ಸಿಬ್ಬಂದಿಗಳಾದ ಉಮೇಶ್ ಕುಮಾರ್, ಕೀರ್ತಿ, ಶಿವಕುಮಾರ್ ಮತ್ತು ಪವನ್ ಕುಮಾರ್ ಅವರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.


Share News