ಚಿತ್ತೂರು: ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ದೇವಸ್ಥಾನಕ್ಕೆ ಕರೆದೊಯ್ದು, ಪ್ರಿಯಕರನ ಸಹಾಯದಿಂದ ಪತ್ನಿಯೇ ಅತ್ಯಂತ ಕ್ರೂರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗುಡುಪಲ್ಲೆ ಮಂಡಲದಲ್ಲಿ ನಡೆದಿದೆ.
ತಮಿಳುನಾಡಿನ ಸುಳಗಿರಿ ಬಳಿಯ ದೇವಾಸನಪಲ್ಲೆಯ ರಮೇಶ್ (ಹೊಸೂರಿನ ಖಾಸಗಿ ಕಂಪನಿ ಉದ್ಯೋಗಿ) ಕೊಲೆಯಾದ ದುರ್ದೈವಿ. ಕುಪ್ಪಂ ಕ್ಷೇತ್ರದ ಬೋಯನಪಲ್ಲೆ ಮೂಲದ ಹಸಿನಿ ಎಂಬಾಕೆಯೊಂದಿಗೆ ಎರಡು ವರ್ಷಗಳ ಹಿಂದೆ ರಮೇಶ್ ವಿವಾಹವಾಗಿದ್ದು, ದಂಪತಿಗೆ ಒಂದು ವರ್ಷದ ಮಗಳು ಮೌಲಿಕಾಶ್ರೀ ಇದ್ದಾಳೆ. ಹಸಿನಿಯ ಅಕ್ರಮ ಸಂಬಂಧವನ್ನು ಪತಿ ವಿರೋಧಿಸಿದ್ದರಿಂದ ಆಕೆಯೇ ಈ ಭೀಕರ ಕೃತ್ಯಕ್ಕೆ ಸಂಚು ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ನಡೆದದ್ದು ಹೇಗೆ?
ಅಮಾವಾಸ್ಯೆಯ ಹಿನ್ನೆಲೆಯಲ್ಲಿ ದೇವರ ಆಶೀರ್ವಾದ ಪಡೆಯುವ ನೆಪದಲ್ಲಿ ಹಸಿನಿ ತನ್ನ ಪತಿ ಮತ್ತು ಮಗುವನ್ನು ದ್ವಿಚಕ್ರ ವಾಹನದಲ್ಲಿ ಗುಡುಪಲ್ಲೆ ಮಂಡಲದ ಮಲ್ಲಪ್ಪ ಕೊಂಡ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಳು. ಮಾರ್ಗಮಧ್ಯೆ ಘಾಟ್ ರಸ್ತೆಯ ಮೂರನೇ ತಿರುವಿನಲ್ಲಿ ತನ್ನ ಮೊಬೈಲ್ ಫೋನ್ ಬಿದ್ದಿದೆ ಎಂದು ಪತಿಗೆ ನಂಬಿಸಿ ಬೈಕ್ ನಿಲ್ಲಿಸಲು ಹೇಳಿದ್ದಳು.
ಈ ಹಿಂದೆನೇ ಪ್ಲಾನ್ ಮಾಡಿಕೊಂಡಿದ್ದಂತೆ, ಆಕೆಯ ಪ್ರಿಯಕರ ಹಾಗೂ ಇತರ ಇಬ್ಬರು ಅಲ್ಲಿಗೆ ಆಗಮಿಸಿ ಕಾಯುತ್ತಿದ್ದರು. ರಮೇಶ್ ಬೈಕ್ ನಿಲ್ಲಿಸುತ್ತಿದ್ದಂತೆ ಹಠಾತ್ತನೆ ದಾಳಿ ನಡೆಸಿದ ದುಷ್ಕರ್ಮಿಗಳು ಆತನನ್ನು ಪೊದೆಗಳಿಗೆ ಎಳೆದುಕೊಂಡು ಹೋಗಿ ಚಾಕುವಿನಿಂದ ಇರಿದು ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಕೊಲೆ ಬಳಿಕ ಸಾಕ್ಷ್ಯ ನಾಶಪಡಿಸಲು ತಮ್ಮ ಬಟ್ಟೆ ಹಾಗೂ ಕೈಗವಸುಗಳನ್ನು ಬೆಂಕಿ ಇಟ್ಟು ಸುಟ್ಟುಹಾಕಿದ್ದರು.
ಡಿಜಿಟಲ್ ಸಾಕ್ಷ್ಯಗಳಿಂದ ಬಯಲಾದ ಸತ್ಯ:
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಸಿಸಿಟಿವಿ ದೃಶ್ಯಾವಳಿಗಳು, ಡಿಜಿಟಲ್ ಪುರಾವೆಗಳು ಹಾಗೂ ತಾಂತ್ರಿಕ ವಿಶ್ಲೇಷಣೆಯ ಆಧಾರದ ಮೇಲೆ ಕುಪ್ಪಂ ಡಿಎಸ್ಪಿ ಪಾರ್ಥಸಾರಥಿ ನೇತೃತ್ವದ ಪೊಲೀಸರು ಪ್ರಕರಣದ ರಹಸ್ಯವನ್ನು ಭೇದಿಸಿದ್ದಾರೆ. ಪತ್ನಿ ಹಸಿನಿ ಹಾಗೂ ಆಕೆಯ ಪ್ರಿಯಕರ ಸೇರಿದಂತೆ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.