Share News

ಮೈಸೂರು ರಸ್ತೆಯ ಬಿಡದಿ ಬಳಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಬೃಹತ್ ನಕಲಿ ಔಷಧ ತಯಾರಿಕೆ ಹಾಗೂ ಮರುಪ್ಯಾಕಿಂಗ್ (Repacking) ಗೋದಾಮಿನ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯ ವೇಳೆ ಬರೋಬ್ಬರಿ ೫ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಕಲಿ ಔಷಧಿಗಳನ್ನು ಜಪ್ತಿ ಮಾಡಲಾಗಿದ್ದು, ಭಾರಿ ಪ್ರಮಾಣದ ಡ್ರಗ್ ಮಾಫಿಯಾ ಜಾಲವೊಂದನ್ನು ಜಾಲಾಡಲಾಗಿದೆ.

​ವಿದೇಶಿ ಕಂಪನಿಗಳ ಹೆಸರಿನಲ್ಲಿ ನಕಲಿ ಲೇಬಲಿಂಗ್!

ಅಧಿಕೃತ ಪರವಾನಗಿ (License) ಇಲ್ಲದೆ ಕದ್ದುಮುಚ್ಚಿ ನಡೆಯುತ್ತಿದ್ದ ಈ ಗೋದಾಮಿನಲ್ಲಿ, ಪ್ರಸಿದ್ಧ ವಿದೇಶಿ ಕಂಪನಿಗಳ ನಕಲಿ ಔಷಧಿಗಳನ್ನು ಸಿದ್ಧಪಡಿಸಿ ಅದಕ್ಕೆ ಆಕರ್ಷಕ ಲೇಬಲ್‌ಗಳನ್ನು ಅಂಟಿಸಿ ಮಾರುಕಟ್ಟೆಗೆ ಪೂರೈಸಲಾಗುತ್ತಿತ್ತು. ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಈ ಜಾಲ, ಕಳಪೆ ಮಟ್ಟದ ಔಷಧಿಗಳನ್ನು ಮರುಪ್ಯಾಕಿಂಗ್ ಮಾಡಿ ಭಾರಿ ಬೆಲೆಗೆ ಮಾರಾಟ ಮಾಡುತ್ತಿತ್ತು ಎಂಬುದು ತನಿಖೆಯಿಂದ ಬಯಲಾಗಿದೆ.

​ಇಲಾಖೆಯ ಭರ್ಜರಿ ಕಾರ್ಯಾಚರಣೆ

ನಿಖರ ಮಾಹಿತಿ ಆಧರಿಸಿ ದಾಳಿ ನಡೆಸಿದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳ ತಂಡ, ಗೋದಾಮಿನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ನಕಲಿ ಮಾತ್ರೆಗಳು, ಸಿರಪ್‌ಗಳು ಹಾಗೂ ಪ್ಯಾಕಿಂಗ್ ಯಂತ್ರಗಳನ್ನು ಸೀಜ್ ಮಾಡಿದೆ.

​ಸಾರ್ವಜನಿಕರ ಆರೋಗ್ಯಕ್ಕೆ ತೀವ್ರ ಅಪಾಯವನ್ನುಂಟು ಮಾಡುತ್ತಿದ್ದ ಈ ಅಕ್ರಮ ಜಾಲದ ಹಿಂದಿರುವ ಮಾಲೀಕರು ಹಾಗೂ ವಿತರಕರನ್ನು ಪತ್ತೆಹಚ್ಚಲು ಇಲಾಖೆಯು ತನಿಖೆಯನ್ನು ತೀವ್ರಗೊಳಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.


Share News