Share News

ಹಾವೇರಿ: ಬೆಳಗಾವಿಯ ಕುಖ್ಯಾತ ‘ಶಿವಂ ಅಸೋಶಿಯೇಟ್ಸ್’ ಹಗರಣದ ಮಾದರಿಯಲ್ಲೇ ಇದೀಗ ಹಾವೇರಿ ಜಿಲ್ಲೆಯಲ್ಲೂ ಬೃಹತ್ ವಂಚನೆ ಜಾಲ ಬೆಳಕಿಗೆ ಬಂದಿದೆ. ಮನೆಯಲ್ಲೇ ಕುಳಿತು ಸ್ವಯಂ ಉದ್ಯೋಗ ಮಾಡಿ ಕೈತುಂಬಾ ಆದಾಯ ಗಳಿಸಬಹುದು ಎಂದು ನಂಬಿಸಿ, ಸಾವಿರಾರು ಮುಗ್ಧ ಮಹಿಳೆಯರಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿ ಕಂಪನಿಯ ಮಾಲೀಕರು ರಾತ್ರೋರಾತ್ರಿ ನಾಪತ್ತೆಯಾಗಿರುವ ಗಂಭೀರ ಆರೋಪ ಕೇಳಿಬಂದಿದೆ.

​ಹಾವೇರಿ ನಗರದ ಅಶ್ವಿನಿ ನಗರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ‘ಎಸ್‌ಎಲ್‌ವಿ ಮಹಿಳಾ ಮಾರ್ಟ್ ಆ್ಯಂಡ್ ಮಾರ್ಕೆಟಿಂಗ್’ ಸಂಸ್ಥೆಯ ವಿರುದ್ಧ ಈ ಕೋಟಿ ಕೋಟಿ ವಂಚನೆಯ ಆರೋಪ ಕೇಳಿಬಂದಿದ್ದು, ನೊಂದ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ.

ಸಂಸ್ಥೆಯ ಪ್ರಮುಖರಾದ ವಿನಾಯಕ ಆನ್ವೇರಿ ಹಾಗೂ ರಮ್ಯಾ ಎಂಬುವವರು ಈ ವಂಚನೆ ಜಾಲದ ಸೂತ್ರಧಾರರಾಗಿದ್ದಾರೆ ಎನ್ನಲಾಗಿದೆ. ಮಹಿಳೆಯರನ್ನು ಆಕರ್ಷಿಸಲು ಇವರು ವಿಭಿನ್ನ ತಂತ್ರ ಹೂಡಿದ್ದರು. ಕಂಪನಿಯ ವತಿಯಿಂದ ಊದಬತ್ತಿ, ಮೇಣದ ಬತ್ತಿ, ಕರ್ಪೂರ ಹಾಗೂ ಧೂಪ ಸೇರಿದಂತೆ ವಿವಿಧ ಗೃಹ ಉತ್ಪನ್ನಗಳ ಕಚ್ಚಾ ವಸ್ತುಗಳನ್ನು ನೀಡಲಾಗುವುದು, ಅವುಗಳನ್ನು ಮನೆಯಲ್ಲೇ ಪ್ಯಾಕಿಂಗ್ ಮಾಡಿ ವಾಪಸ್ ನೀಡಿದರೆ ಪ್ರತಿಯಾಗಿ ಭಾರಿ ಮೊತ್ತದ ವೇತನ ಮತ್ತು ಕಮಿಷನ್ ನೀಡುವುದಾಗಿ ನಂಬಿಸಿದ್ದರು. ಅಷ್ಟೇ ಅಲ್ಲದೆ, ತಮಗೆ ರಾಜ್ಯಾದ್ಯಂತ ಒಟ್ಟು 9 ಸುಸಜ್ಜಿತ ಶಾಖೆಗಳಿವೆ ಎಂದು ಸುಳ್ಳು ಹೇಳಿ ಜನರ ವಿಶ್ವಾಸ ಗಳಿಸಿದ್ದರು.

​ಈ ಉದ್ಯೋಗ ಪಡೆಯಬೇಕಾದರೆ ಕನಿಷ್ಠ ₹25 ಸಾವಿರದಿಂದ ₹5 ಲಕ್ಷದವರೆಗೆ ಭದ್ರತಾ ಠೇವಣಿ (ಡೆಪಾಸಿಟ್) ಹೂಡಿಕೆ ಮಾಡಬೇಕು ಎಂಬ ನಿಯಮ ಇಡಲಾಗಿತ್ತು. ಅದರಲ್ಲೂ ಮುಖ್ಯವಾಗಿ, ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಯಾವುದೇ ಶ್ರಮವಿಲ್ಲದೆ ₹26,000 ನಿಶ್ಚಿತ ಆದಾಯ ನೀಡುವುದಾಗಿ ಆಮಿಷ ಒಡ್ಡಲಾಗಿತ್ತು. ಈ ಮಾತುಗಳನ್ನು ಸತ್ಯ ಎಂದು ನಂಬಿದ ಹಾವೇರಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಸಾವಿರಾರು ಮಧ್ಯಮ ವರ್ಗದ ಮಹಿಳೆಯರು ಸಾಲಸೋಲ ಮಾಡಿ, ಚಿನ್ನಾಭರಣ ಅಡಮಾನವಿಟ್ಟು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದರು.

ಮೂಲಗಳ ಪ್ರಕಾರ, ಸಂಸ್ಥೆಯ ಕಿಲಾಡಿಗಳು ಮಹಿಳೆಯರಿಂದ ಸುಮಾರು ₹10 ಕೋಟಿಗೂ ಅಧಿಕ ಮೊತ್ತದ ಹಣವನ್ನು ಸಂಗ್ರಹಿಸಿ, ಇದೀಗ ಕಚೇರಿ ಮುಚ್ಚಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ರಾತ್ರೋರಾತ್ರಿ ಪರಾರಿಯಾಗಿದ್ದಾರೆ. ತಮಗೆ ಮೋಸ ಹೋಗಿರುವುದು ತಿಳಿಯುತ್ತಿದ್ದಂತೆಯೇ ಆಘಾತಕ್ಕೊಳಗಾದ ಸಾವಿರಾರು ನೊಂದ ಮಹಿಳೆಯರು ಹಾವೇರಿ ಶಹರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಆಕ್ರೋಶ ಹೊರಹಾಕಿದ್ದಾರೆ.

ವಂಚನೆ ನಡೆಸಿ ತಲೆಮರೆಸಿಕೊಂಡಿರುವ ಮುಖ್ಯ ಆರೋಪಿ ವಿನಾಯಕ ಆನ್ವೇರಿ ಹಾಗೂ ರಮ್ಯಾ ಸೇರಿದಂತೆ ಸಂಬಂಧಪಟ್ಟ ಎಲ್ಲರನ್ನೂ ಕೂಡಲೇ ಬಂಧಿಸಬೇಕು ಮತ್ತು ತಾವು ಕಷ್ಟಪಟ್ಟು ಹೂಡಿಕೆ ಮಾಡಿರುವ ಹಣವನ್ನು ವಾಪಸ್ ಕೊಡಿಸಬೇಕು ಎಂದು ನೊಂದ ಮಹಿಳೆಯರು ಪೊಲೀಸರನ್ನು ಬಿಗಿಪಟ್ಟು ಹಿಡಿದು ಆಗ್ರಹಿಸಿದ್ದಾರೆ.

​ಸದ್ಯ ಈ ಬೃಹತ್ ವಂಚನೆ ಪ್ರಕರಣ ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ಜಾಲ ಬೀಸಿದ್ದಾರೆ.

 


Share News