Share News

ನಾವು ಮಾಡುವ ಪ್ರಾಮಾಣಿಕ ಕೆಲಸ ಯಾವುದೂ ಚಿಕ್ಕದಲ್ಲ” ಎಂಬುದನ್ನು ಇಂದಿನ ಯುವ ಪೀಳಿಗೆಗೆ ಸಾಬೀತುಪಡಿಸಿದ್ದಾರೆ ಹೈದರಾಬಾದ್ ಮೂಲದ ಯುವತಿ ಎಂ. ಬಿಂದುಪ್ರಿಯಾ. ಸಾಂಪ್ರದಾಯಿಕ ಮನಸ್ಥಿತಿಯ ಸಮಾಜದ ಬೇಲಿಗಳನ್ನು ಮುರಿದು, ಒಂದು ಕಡೆ ಉನ್ನತ ವಿದ್ಯಾಭ್ಯಾಸ ಮಾಡುತ್ತಲೇ ಮತ್ತೊಂದು ಕಡೆ ತಂದೆಯ ಕ್ಷೌರಿಕ ವೃತ್ತಿಯನ್ನು ಹೆಮ್ಮೆಯಿಂದ ಮುಂದುವರಿಸಿಕೊಂಡು ಹೋಗುತ್ತಿರುವ ಈಕೆಯ ಸಾಹಸದ ಕಥೆ ಈಗ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗುತ್ತಿದ್ದು, ಲಕ್ಷಾಂತರ ಜನರಿಗೆ ಪ್ರೇರಣೆಯಾಗಿದೆ.

ಹೈದರಾಬಾದ್ ಸಮೀಪದ ಸಣ್ಣ ಹಳ್ಳಿಯೊಂದರ ಪ್ರತಿಭೆಯಾದ ಎಂ. ಬಿಂದುಪ್ರಿಯಾ ಪ್ರಸ್ತುತ ಬಿಬಿಎ (BBA) ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಈಕೆಯ ದಿನಚರಿ ಉಳಿದ ವಿದ್ಯಾರ್ಥಿಗಳಂತಲ್ಲ. ಕಾಲೇಜಿಗೆ ಹೋಗಿ ಪಾಠ ಕೇಳುವುದರ ಜೊತೆಗೆ, ಬಿಡುವಿನ ಅವಧಿಯಲ್ಲಿ ತನ್ನ ತಂದೆಯ ಸಲೂನ್ (ಬಾರ್ಬರ್ ಶಾಪ್) ಅಂಗಡಿಯನ್ನು ಈಕೆ ಸ್ವತಃ ತಾನೇ ನಿಂತು ಮುನ್ನಡೆಸುತ್ತಿದ್ದಾಳೆ! ಕಟಿಂಗ್, ಶೇವಿಂಗ್ ಮಾಡುವ ಕಲೆಯನ್ನೂ ಕರಗತ ಮಾಡಿಕೊಂಡಿರುವ ಈಕೆ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದಾಳೆ.

ಇಂದಿಗೂ ನಮ್ಮ ಸಮಾಜದಲ್ಲಿ ಕೆಲವು ಉದ್ಯೋಗಗಳು ಕೇವಲ ಪುರುಷರಿಗೆ ಮಾತ್ರ ಸೀಮಿತ ಎಂಬ ಕಟ್ಟುಪಾಡುಗಳಿವೆ. ಹೆಣ್ಣುಮಗಳೊಬ್ಬಳು ಕಟಿಂಗ್, ಶೇವಿಂಗ್ ಮಾಡುವ ಸಲೂನ್ ಉದ್ಯೋಗಕ್ಕೆ ಇಳಿದಾಗ ಆರಂಭದಲ್ಲಿ ಸಮಾಜದಿಂದ ಕೇಳಿಬಂದಿದ್ದು ಪ್ರೋತ್ಸಾಹದ ಮಾತುಗಳಲ್ಲ. ಬದಲಿಗೆ ಕಟು ಟೀಕೆಗಳು, ಅಪಹಾಸ್ಯ ಮತ್ತು ಅನಗತ್ಯ ಚುಚ್ಚುಮಾತುಗಳು! ಹೆಣ್ಣಾಗಿ ಈ ಕೆಲಸ ಮಾಡಬೇಕೇ ಎಂಬ ಪ್ರಶ್ನೆಗಳು ಎದುರಾದವು.

ತನ್ನ ಉದ್ಯೋಗ ಮತ್ತು ನಿರ್ಧಾರದ ಬಗ್ಗೆ ಸಮಾಜ ಏನೇ ಮಾತನಾಡಿದರೂ ಬಿಂದುಪ್ರಿಯಾ ಮಾತ್ರ ಧೃತಿಗೆಡಲಿಲ್ಲ. ನೆಗೆಟಿವ್ ಮಾತುಗಳನ್ನು ಕೇವಲ ಧೂಳಿನಂತೆ ಕೊಡವಿ, ತನಗೆ ಅತ್ಯಂತ ಮುಖ್ಯವಾದ ಕುಟುಂಬದ ಜವಾಬ್ದಾರಿ ಮತ್ತು ಸ್ವಾವಲಂಬಿ ಬದುಕಿನತ್ತ ಗಮನ ಹರಿಸಿದಳು. ಸಮಾಜದ ನಿಂದನೆಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಮುನ್ನಡೆದಳು.

ಯಾವ ಕೆಲಸವೂ ಮೇಲಲ್ಲ, ಯಾವುದೂ ಕೀಳಲ್ಲ ಎಂಬ “ಕಾಯಕವೇ ಕೈಲಾಸ” ತತ್ವವನ್ನು ಬಿಂದುಪ್ರಿಯಾ ಇಂದಿನ ಸಮಾಜಕ್ಕೆ ಗಟ್ಟಿಯಾಗಿ ಸಾರಿದ್ದಾಳೆ. ಕಠಿಣ ಪರಿಶ್ರಮ ಮತ್ತು ಹೆಮ್ಮೆಯಿಂದ ಮಾಡುವ ಪ್ರತಿಯೊಂದು ಪ್ರಾಮಾಣಿಕ ಕೆಲಸವೂ ಗೌರವಕ್ಕೆ ಅರ್ಹ ಎಂಬುದನ್ನು ಆಕೆ ಪ್ರಾಯೋಗಿಕವಾಗಿ ಸಾಬೀತುಪಡಿಸಿದ್ದಾಳೆ. ಒಂದು ಕಡೆ ಕುಟುಂಬಕ್ಕೆ ಆರ್ಥಿಕ ಆಸರೆಯಾಗುತ್ತಾ, ಮತ್ತೊಂದು ಕಡೆ ತನ್ನ ಉಜ್ವಲ ಭವಿಷ್ಯಕ್ಕಾಗಿ ಬಿಬಿಎ ಓದುತ್ತಿರುವ ಈಕೆಯ ಮಲ್ಟಿಟಾಸ್ಕಿಂಗ್ ಗುಣ ನಿಜಕ್ಕೂ ಅದ್ಭುತ.

ಕನಸುಗಳನ್ನು ನನಸು ಮಾಡಿಕೊಳ್ಳಲು ಮತ್ತು ಕುಟುಂಬದ ಕಷ್ಟಕ್ಕೆ ಹೆಗಲಾಗಲು ಬಯಸುವ ದೇಶದ ಕೋಟ್ಯಂತರ ಹೆಣ್ಣುಮಕ್ಕಳಿಗೆ ಇಂದು ಬಿಂದುಪ್ರಿಯಾ ಬಹುದೊಡ್ಡ ರೋಲ್ ಮಾಡೆಲ್ ಆಗಿ ನಿಂತಿದ್ದಾಳೆ. ಸಮಾಜದ ಹಳೇ ಮನಸ್ಥಿತಿಯ ಚೌಕಟ್ಟನ್ನು ಮುರಿದು ಮುನ್ನುಗ್ಗುತ್ತಿರುವ ಈಕೆಯ ಧೈರ್ಯಕ್ಕೆ ‘ಅರಕ್ಷಕರ ಟೈಮ್ಸ್ ಮೀಡಿಯಾ’ ವತಿಯಿಂದ ಒಂದು ದೊಡ್ಡ ಸಲ್ಯೂಟ್!

 


Share News