Share News

ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಧಾಮದಲ್ಲಿ ಇತ್ತೀಚೆಗೆ ನಡೆದ ಶೂಟೌಟ್‌ ಪ್ರಕರಣದ ಬೆನ್ನಲ್ಲೇ ಮತ್ತೊಂದು ತೀವ್ರ ಆತಂಕಕಾರಿ ಬೆಳವಣಿಗೆ ಬೆಳಕಿಗೆ ಬಂದಿದೆ. ವನ್ಯಧಾಮದ ವ್ಯಾಪ್ತಿಯಲ್ಲಿರುವ ಕಳ್ಳಬೇಟೆ ತಡೆ ಶಿಬಿರಗಳು (Anti-Poaching Camps) ಹಾಗೂ ಅರಣ್ಯ ಸಿಬ್ಬಂದಿಯನ್ನೇ ಗುರಿಯಾಗಿಸಿಕೊಂಡು ಸರಣಿ ದಾಳಿ ನಡೆಸಿರುವ ದಟ್ಟ ಶಂಕೆ ವ್ಯಕ್ತವಾಗಿದೆ.

​ಹಲವು ಶಿಬಿರಗಳ ಮೇಲೆ ದಾಳಿ, ಧ್ವಂಸ!

ಆಗಸ್ಟ್ ೧೫ರಂದು ಕಾವೇರಿ ವನ್ಯಧಾಮದ ಕಳ್ಳಿದೊಡ್ಡಿ, ಬೂದಿಕೆರೆ, ಬಂಡಳ್ಳಿ, ಭೀಮೇಶ್ವರಿ, ನಾಲಾಬೊಳಿ, ಜಾಗೇರಿ ಹಾಗೂ ಹೊಳೆ ಮುರದಟ್ಟಿ ಕಳ್ಳಬೇಟೆ ತಡೆ ಶಿಬಿರಗಳಲ್ಲಿ ಅಪರಿಚಿತರು ಅಕ್ರಮವಾಗಿ ಪ್ರವೇಶಿಸಿ ಧ್ವಂಸ ಹಾಗೂ ಸ್ಫೋಟ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದರ ಬೆನ್ನಲ್ಲೇ ಆಗಸ್ಟ್ ೧೭ರಂದು ಕೊತ್ತನೂರು ವಲಯದ ಮಿಂಚಿನಾರೆಹಳ್ಳ ಕಳ್ಳಬೇಟೆ ತಡೆ ಶಿಬಿರದಲ್ಲೂ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.

​ಸಿಬ್ಬಂದಿ ವಾಪಸ್ – ಹೆದರಿಕೆಯ ವಾತಾವರಣ

ಕಾಡಿನ ಒಳಭಾಗದಲ್ಲಿದ್ದ ಶಿಬಿರಗಳ ಮೇಲೆ ಅಪರಿಚಿತರು ದಾಳಿ ನಡೆಸುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ, ಅರಣ್ಯಾಧಿಕಾರಿಗಳು ಹೆದರಿ ಮುನ್ನೆಚ್ಚರಿಕೆ ಕ್ರಮವಾಗಿ ಶಿಬಿರಗಳಲ್ಲಿದ್ದ ಸಿಬ್ಬಂದಿಯನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಂಡಿದ್ದರು ಎನ್ನಲಾಗಿದೆ. ಈ ಸರಣಿ ಘಟನೆಗಳಿಂದ ಕಾವೇರಿ ವನ್ಯಧಾಮ ವ್ಯಾಪ್ತಿಯಲ್ಲಿ ತೀವ್ರ ಆತಂಕ ಹಾಗೂ ಭಯದ ವಾತಾವರಣ ನಿರ್ಮಾಣವಾಗಿದೆ.

​ಪೊಲೀಸ್ ಇಲಾಖೆಯಿಂದ ತನಿಖೆ ಚುರುಕು

ಘಟನೆಯ ಗಂಭೀರತೆಯನ್ನು ಪರಿಗಣಿಸಿ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃತ್ಯದ ಹಿಂದೆ ಯಾರಿದ್ದಾರೆ ಹಾಗೂ ಇದರ ಉದ್ದೇಶವೇನು ಎಂಬುದರ ಕುರಿತು ಪೊಲೀಸರು ಸುದೀರ್ಘ ತನಿಖೆ ಮುಂದುವರಿಸಿದ್ದಾರೆ.

 


Share News