ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಮಧ್ಯವರ್ತಿ ಕಾರಾಗೃಹದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆಯಾದ ಪ್ರಕರಣದ ತನಿಖೆ ಇದೀಗ ತೀವ್ರಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಡಿಐಜಿ ಜಿನೇಂದ್ರ ಖನಗಾವಿ ಅವರು ಜೈಲು ಎಸ್‌ಪಿ ಅನ್ಷುಕುಮಾರ್ ಅವರ ಹೇಳಿಕೆಯನ್ನು ಅಧಿಕೃತವಾಗಿ ದಾಖಲಿಸಿಕೊಂಡಿದ್ದಾರೆ.
’ಬ್ಯಾರಕ್ ವಿಸಿಟ್ ವೇಳೆ ಅಕ್ರಮ ಕಂಡುಬಂದಿರಲಿಲ್ಲ’: ಎಸ್‌ಪಿ ಹೇಳಿಕೆ
ಡಿಐಜಿ ಅವರಿಗೆ ವಿವರಣೆ ನೀಡಿರುವ ಎಸ್‌ಪಿ ಅನ್ಷುಕುಮಾರ್, “ತಾವು ಜೈಲಿನ ಬ್ಯಾರಕ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾಗ ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳು ಅಥವಾ ಅಕ್ರಮಗಳು ಕಂಡುಬಂದಿರಲಿಲ್ಲ. ಇನ್ನು ಪ್ರಜ್ವಲ್ ರೇವಣ್ಣ ಅವರ ಕೈಗೆ ಮೊಬೈಲ್ ಹೇಗೆ ಸಿಕ್ಕಿತು ಅಥವಾ ಅದನ್ನು ಯಾರು ತಲುಪಿಸಿದರು ಎಂಬುದರ ಬಗ್ಗೆ ತಮಗೆ ಮಾಹಿತಿಯಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.
ಯೂನಿಫಾರ್ಮ್ ವಿಚಾರದಲ್ಲಿ ವಿನಾಯಿತಿ ಇಲ್ಲ!
ವಿಚಾರಣೆ ವೇಳೆ ಜೈಲು ನಿಯಮಾವಳಿಗಳ ಬಗ್ಗೆ ಸ್ಪಷ್ಟನೆ ನೀಡಿರುವ ಎಸ್‌ಪಿ, “ಪ್ರಜ್ವಲ್ ರೇವಣ್ಣ ಅವರು ಜೈಲು ಯೂನಿಫಾರ್ಮ್ ಧರಿಸದಿರುವ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಎಎಸ್‌ಪಿಗೆ ಸೂಚನೆ ನೀಡಲಾಗಿತ್ತು. ಕಾರಾಗೃಹದ ನಿಯಮಗಳನ್ನು ಪ್ರತಿಯೊಬ್ಬ ಕೈದಿಯೂ ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಈ ವಿಚಾರದಲ್ಲಿ ಯಾರಿಗೂ ವಿನಾಯಿತಿ ನೀಡಬಾರದು ಎಂದು ಅಧಿಕಾರಿಗಳಿಗೆ ಆದೇಶಿಸಲಾಗಿತ್ತು” ಎಂದು ತಿಳಿಸಿದ್ದಾರೆ.
ಡಿಜಿಪಿಗೆ ಶೀಘ್ರವೇ ಅಂತಿಮ ವರದಿ ಸಲ್ಲಿಕೆ
ಜೈಲಿನಲ್ಲಿ ನಡೆದ ಈ ಅಕ್ರಮದ ಕುರಿತು ಒಂದು ವಾರದೊಳಗೆ ಸಮಗ್ರ ವರದಿ ನೀಡುವಂತೆ ಮೇಲಧಿಕಾರಿಗಳು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಸ್‌ಪಿಗೆ ಜಾರಿ ಮಾಡಲಾಗಿದ್ದ ಶೋಕಾಸ್ ನೋಟಿಸ್‌ಗೆ ಉತ್ತರ ಪಡೆಯಲಾಗಿದೆ. ಇನ್ನುಳಿದ ಮೂರು ದಿನಗಳಲ್ಲಿ ಜೈಲು ಡಿಐಜಿ ಅವರು ತಮ್ಮ ಸ್ವಂತ ಹೇಳಿಕೆ ಸೇರಿದಂತೆ ಇತರೆ ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಲಿದ್ದಾರೆ. ಪ್ರಕ್ರಿಯೆ ಪೂರ್ಣಗೊಂಡ ತಕ್ಷಣವೇ ಪರಪ್ಪನ ಅಗ್ರಹಾರ ಜೈಲಿನಲ್ಲಿನ ಅಕ್ರಮಗಳ ಕುರಿತು ಜೈಲು ಡಿಜಿಪಿಯವರಿಗೆ ಅಂತಿಮ ತನಿಖಾ ವರದಿಯನ್ನು ಸಲ್ಲಿಸುವ ಸಾಧ್ಯತೆಯಿದೆ.