ರಾಮನಗರ (ಬಿಡದಿ): ಮನೆಯ ಬಾಗಿಲು ತೆಗೆದು ಬೀರುವಿನ ಲಾಕರ್ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಕಳ್ಳತನ ಪ್ರಕರಣವನ್ನು ಬಿಡದಿ ಠಾಣೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣ ಸಂಬಂಧ ಓರ್ವ ಮಹಿಳಾ ಆರೋಪಿಯನ್ನು ಬಂಧಿಸಿ, ಆಕೆಯಿಂದ ಭಾರಿ ಪ್ರಮಾಣದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ದಿನಾಂಕ 05.07.2026 ರಂದು ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಮನಹಳ್ಳಿ ಗ್ರಾಮದಲ್ಲಿ ಈ ಕಳ್ಳತನ ನಡೆದಿತ್ತು. ದೂರುದಾರರು ಮನೆಯಲ್ಲಿ ಇಲ್ಲದ ಸಮಯ ನೋಡಿ ಒಳಪ್ರವೇಶಿಸಿದ್ದ ಖದೀಮರು, ಬೀರುವಿನ ಲಾಕರ್ನಲ್ಲಿದ್ದ ಭಾರಿ ಪ್ರಮಾಣದ ಚಿನ್ನದ ವಡವೆಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಸಂತ್ರಸ್ತರು ನೀಡಿದ ದೂರಿನನ್ವಯ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಿಡದಿ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡವು ತಕ್ಷಣವೇ ತನಿಖೆ ಚುರುಕುಗೊಳಿಸಿತು. ಕಳ್ಳತನದ ಬಗ್ಗೆ ಮಾಹಿತಿ ಕಲೆಹಾಕಿ, ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಕಳ್ಳತನದಲ್ಲಿ ಭಾಗಿಯಾಗಿದ್ದ ಓರ್ವ ಮಹಿಳಾ ಆರೋಪಿತೆಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಶಪಡಿಸಿಕೊಂಡ ಚಿನ್ನಾಭರಣ: 152 ಗ್ರಾಂ ತೂಕದ ಚಿನ್ನದ ವಡವೆಗಳು
ವಶಪಡಿಸಿಕೊಂಡ ಸ್ವತ್ತಿನ ಅಂದಾಜು ಮೌಲ್ಯ: ಸುಮಾರು ₹22,00,000/- (ಇಪ್ಪತ್ತೆರಡು ಲಕ್ಷ ರೂಪಾಯಿಗಳು)
ಬಂಧಿತ ಆರೋಪಿಯಿಂದ ಕಳುವಾಗಿದ್ದ ಸಂಪೂರ್ಣ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ದೂರು ದಾಖಲಾದ ಕೆಲವೇ ದಿನಗಳಲ್ಲಿ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ, ₹22 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಮರಳಿ ವಶಪಡಿಸಿಕೊಂಡ ಬಿಡದಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಸಮಯೋಚಿತ ಕಾರ್ಯಾಚರಣೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.