ಬೆಂಗಳೂರು (ಆನೇಕಲ್): ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಸಮೀಪದ ಮೈಲಸಂದ್ರ ದಿಣ್ಣೆಪಾಳ್ಯದಲ್ಲಿ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳ ಗುಂಪೊಂದು ಲಾಂಗು-ಮಚ್ಚುಗಳಿಂದ ಮನೆಯೊಂದರ ಮೇಲೆ ದಿಢೀರ್ ದಾಳಿ ನಡೆಸಿ, ವಿಧ್ವಂಸಕ ಕೃತ್ಯ ಎಸಗಿರುವ ಭಯಾನಕ ಘಟನೆ ನಡೆದಿದೆ.
ಸ್ಥಳೀಯ ನಿವಾಸಿ ವಿಶ್ವನಾಥ ರೆಡ್ಡಿ ಎಂಬುವವರ ಮನೆ ಹಾಗೂ ಆಸ್ತಿ-ಪಾಸ್ತಿಗಳನ್ನು ಗುರಿಯಾಗಿಸಿಕೊಂಡು ಈ ಭೀಕರ ದಾಳಿ ನಡೆಸಲಾಗಿದೆ.
ಕೂದಲೆಳೆ ಅಂತರದಲ್ಲಿ ಪಾರು: ಮನೆ ಮಾಲೀಕ ವಿಶ್ವನಾಥ ರೆಡ್ಡಿ ಅವರು ಪತ್ನಿ ಹಾಗೂ ಸೊಸೆಯೊಂದಿಗೆ ಮನೆಯ ಹೊರಗಡೆ ಕುಳಿತಿದ್ದ ವೇಳೆ, ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಹಿಡಿದು ನುಗ್ಗಿದ್ದಾರೆ. ಅಪಾಯವನ್ನು ಅರಿತ ಕುಟುಂಬಸ್ಥರು ತಕ್ಷಣ ಮನೆಯೊಳಗೆ ಓಡಿ ಬಾಗಿಲು ಹಾಕಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ.
ಮನೆ, ಕಾರು, ಬೈಕ್ ಪುಡಿಪುಡಿ: ಮನೆಯೊಳಗೆ ನುಗ್ಗಲು ಸಾಧ್ಯವಾಗದಿದ್ದಾಗ ಆಕ್ರೋಶಗೊಂಡ ಖದೀಮರು, ಲಾಂಗು-ಮಚ್ಚುಗಳಿಂದ ಕಿಟಕಿ ಗಾಜುಗಳನ್ನು ಪುಡಿಗೈದಿದ್ದಾರೆ. ಅಲ್ಲದೆ ಮನೆ ಮುಂದೆ ನಿಲ್ಲಿಸಿದ್ದ ಇನ್ನೋವಾ ಕಾರು, ಬೈಕ್ ಹಾಗೂ ಕೈಗೆ ಸಿಕ್ಕ ವಸ್ತುಗಳನ್ನು ಬಾರಿಸಿ ಸಂಪೂರ್ಣ ಧ್ವಂಸಗೊಳಿಸಿದ್ದಾರೆ.
ಅಂಗಡಿ ಮಾಲೀಕ, ಬೈಕ್ ಸವಾರನ ಮೇಲೆಯೂ ಹಲ್ಲೆ: ಸ್ಥಳೀಯ ಬಟ್ಟೆ ಅಂಗಡಿಯೊಂದಕ್ಕೂ ನುಗ್ಗಿದ ದುಷ್ಕರ್ಮಿಗಳು ಅಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಲ್ಲದೆ, ತಡೆಯಲು ಬಂದ ಅಂಗಡಿ ಮಾಲೀಕ ಹಾಗೂ ಬೈಕ್ ಸವಾರನ ಮೇಲೆಯೂ ಹಲ್ಲೆ ನಡೆಸಿ ಸ್ಥಳದಿಂದ ಕಾಲ್ಕೇಲಿದ್ದಾರೆ.
”ನಾವು ಮನೆಯ ಬಾಗಿಲು ಹಾಕಿಕೊಳ್ಳದಿದ್ದರೆ ನಮ್ಮನ್ನು ಕೊಲೆ ಮಾಡುತ್ತಿದ್ದರು. ನಮಗೆ ಯಾರೊಂದಿಗೂ ಯಾವುದೇ ವೈರತ್ವ ಅಥವಾ ದ್ವೇಷವಿರಲಿಲ್ಲ. ದಾಳಿ ನಡೆಸಿದವರು ಯಾರು ಎಂಬುದೇ ತಿಳಿಯುತ್ತಿಲ್ಲ.”
— ವಿಶ್ವನಾಥ ರೆಡ್ಡಿ, ಸಂತ್ರಸ್ತ ಮನೆ ಮಾಲೀಕ.
ಘಟನೆಯಿಂದ ಮೈಲಸಂದ್ರ ಪ್ರದೇಶದಲ್ಲಿ ಸಾರ್ವಜನಿಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬನ್ನೇರುಘಟ್ಟ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಪುಂಡರ ಪತ್ತೆಗೆ ಜಾಲ ಬೀಸಿದ್ದಾರೆ.