Share News

ಬೆಂಗಳೂರು: ಸೈಬರ್ ವಂಚಕರ ಜಾಲ ದಿನದಿಂದ ದಿನಕ್ಕೆ ಬಾಲ ಬಿಚ್ಚುತ್ತಿದ್ದು, ಇದೀಗ ಸಾಮಾನ್ಯ ಜನರಷ್ಟೇ ಅಲ್ಲದೆ ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರನ್ನೂ ದುರುಪಯೋಗಪಡಿಸಿಕೊಂಡು ವಂಚನೆಗೆ ಇಳಿದಿರುವ ಆತಂಕಕಾರಿ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.

​ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ (DCP) ಎಂ. ನಾರಾಯಣ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಯನ್ನು (Fake Facebook Account) ಸೃಷ್ಟಿಸಿರುವ ಸೈಬರ್ ಕಳ್ಳರು, ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ.

ವಂಚಕರು ಡಿಸಿಪಿ ಅವರ ಹೆಸರಿನ ನಕಲಿ ಖಾತೆಯಲ್ಲಿ ಫ್ರಿಡ್ಜ್, ವಾಷಿಂಗ್ ಮಷಿನ್ ಸೇರಿದಂತೆ ಹಲವು ಗೃಹೋಪಯೋಗಿ ವಸ್ತುಗಳು ಅತ್ಯಂತ ಕಡಿಮೆ ದರದಲ್ಲಿ ಮಾರಾಟಕ್ಕಿವೆ ಎಂದು ಆಕರ್ಷಕ ಜಾಹೀರಾತುಗಳ ಪೋಸ್ಟ್ ಹಾಕುತ್ತಿದ್ದರು. ಇದನ್ನು ನಿಜವೆಂದು ನಂಬಿ ವಸ್ತುಗಳನ್ನು ಖರೀದಿಸಲು ಮುಂದಾಗುವ ಸಾರ್ವಜನಿಕರಿಂದ ಯುಪಿಐ (UPI) ಐಡಿಗಳ ಮೂಲಕ ಮುಂಗಡವಾಗಿ ಹಣ ಪಡೆದು ವಂಚಿಸುತ್ತಿದ್ದರು.

​ಹಣ ಕಳೆದುಕೊಂಡ ಕೆಲವರು ಈ ಬಗ್ಗೆ ವಿಚಾರಿಸಲು ನೇರವಾಗಿ ಡಿಸಿಪಿ ಎಂ. ನಾರಾಯಣ ಅವರ ಸ್ನೇಹಿತರನ್ನು ಸಂಪರ್ಕಿಸಿದಾಗ ಈ ಬೃಹತ್ ಜಾಲದ ಆಟ ಬಯಲಾಗಿದೆ. ತಕ್ಷಣವೇ ಪರಿಶೀಲನೆ ನಡೆಸಿದಾಗ ಡಿಸಿಪಿ ಅವರ ಹೆಸರಿನಲ್ಲೇ ನಕಲಿ ಪ್ರೊಫೈಲ್ ಸೃಷ್ಟಿಸಿರುವುದು ಖಚಿತಪಟ್ಟಿದೆ.

ಈ ಸಂಬಂಧ ಈಗಾಗಲೇ ಮೇ ತಿಂಗಳಲ್ಲೇ ದೂರು ದಾಖಲಾಗಿದ್ದರೂ ಸಹ, ವಂಚಕರ ಜಾಲ ಮಾತ್ರ ಸಕ್ರಿಯವಾಗಿಯೇ ಇತ್ತು. ಕಳೆದ ಎರಡು-ಮೂರು ದಿನಗಳ ಅವಧಿಯಲ್ಲೇ ಸುಮಾರು ಏಳು ಮಂದಿ ಈ ಆಮಿಷಕ್ಕೆ ಬಲಿಯಾಗಿದ್ದು, ಒಬ್ಬೊಬ್ಬರಿಂದ ತಲಾ ೨೦ ಸಾವಿರದಿಂದ ೩೦ ಸಾವಿರ ರೂಪಾಯಿವರೆಗೆ ಹಣವನ್ನು ದೋಚಲಾಗಿದೆ ಎನ್ನಲಾಗಿದೆ.

ಪ್ರಕರಣದ ಗಂಭೀರತೆಯನ್ನು ಅರಿತು ಸ್ವತಃ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಎಂ. ನಾರಾಯಣ ಅವರೇ ವಿಡಿಯೋ ಸಂದೇಶದ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದಾರೆ. “ನನ್ನ ಹೆಸರಿನಲ್ಲಿರುವ ನಕಲಿ ಫೇಸ್‌ಬುಕ್ ಖಾತೆಯನ್ನು ಯಾರೂ ನಂಬಬೇಡಿ ಹಾಗೂ ಯಾವುದೇ ರೀತಿಯ ಹಣದ ವ್ಯವಹಾರ ಮಾಡಬೇಡಿ” ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

​ಸದ್ಯ ಈ ಸೈಬರ್ ದಗಾಬಾಜಿ ಕುರಿತು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಎಫ್‌ಐಆರ್ (FIR) ದಾಖಲಾಗಿದ್ದು, ಹಿರಿಯ ಅಧಿಕಾರಿಯ ಹೆಸರನ್ನೇ ಬಳಸಿ ವಂಚಿಸುತ್ತಿರುವ ಸೈಬರ್ ಖದೀಮರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

 


Share News