Share News

ರಾಯಚೂರು: ಅನೈತಿಕ ಸಂಬಂಧದ ಅನುಮಾನಕ್ಕೆ ಯುವಕನೊಬ್ಬನನ್ನು ಊಟ ಮಾಡುತ್ತಿದ್ದ ಸ್ಥಳದಲ್ಲೇ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ.

​ಘಟನೆಯ ಭೀಕರ ವಿವರ:

ಮಾನ್ವಿ ಪಟ್ಟಣದ ಹನುಮೇಶ್ (32) ಕೊಲೆಯಾದ ಯುವಕ. ಆರೋಪಿ ಶಂಕರ್ (23) ಎಂಬಾತನೇ ಈ ಭೀಕರ ಕೃತ್ಯ ಎಸಗಿದ ಕಿರಾತಕ.

​ಕೊಲೆಗೆ ಕಾರಣ: ಆರೋಪಿ ಶಂಕರ್‌ನ ಸಹೋದರಿ ಜೊತೆ ಮೃತ ಹನುಮೇಶ್ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನವೇ ಈ ಹತ್ಯೆಗೆ ಕಾರಣ ಎನ್ನಲಾಗಿದೆ.

​ಊಟದ ತಟ್ಟೆಯಲ್ಲೇ ಸತ್ತ: ಹನುಮೇಶ್ ಮನೆಯಲ್ಲಿ ಕುಟುಂಬಸ್ಥರು ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಆತ ಒಬ್ಬನೇ ಊಟ ಮಾಡಲು ಕುಳಿತಿದ್ದ. ಈ ವೇಳೆ ಹಿಂಬದಿಯಿಂದ ದಿಢೀರ್ ಎಂಟ್ರಿ ಕೊಟ್ಟ ಆರೋಪಿ ಶಂಕರ್, ಮಚ್ಚಿನಿಂದ ಐದಾರು ಬಾರಿ ಭೀಕರವಾಗಿ ಕೊಚ್ಚಿದ್ದಾನೆ. ದಾಳಿಯ ತೀವ್ರತೆಗೆ ಹನುಮೇಶ್ ಊಟದ ತಟ್ಟೆಯಲ್ಲೇ ಹೆಣವಾಗಿ ಬಿದ್ದಿದ್ದಾನೆ.

​ಕೊಲೆಗೂ ಮುನ್ನ ಇನ್‌ಸ್ಟಾಗ್ರಾಂ ಪೋಸ್ಟ್, ಕೊಲೆ ಬಳಿಕ ಶರಣಾಗತಿ!

ಆರೋಪಿ ಶಂಕರ್ ಕೊಲೆ ಮಾಡುವ ಮುನ್ನವೇ ಇನ್‌ಸ್ಟಾಗ್ರಾಂನಲ್ಲಿ (Instagram) ಮಚ್ಚು ಹಿಡಿದುಕೊಂಡಿರುವ ಫೋಟೋ/ವೀಡಿಯೋ ಪೋಸ್ಟ್ ಮಾಡಿ ವಿಕೃತಿ ಮೆರೆದಿದ್ದ. ಕೃತ್ಯ ಎಸಗಿದ ತಕ್ಷಣವೇ ಆತ ನೇರವಾಗಿ ಮಾನ್ವಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

​ಪೋಷಕರ ಆಕ್ರಂದನ:

“ನಮ್ಮ ಮಗ ಅಂಥವನಲ್ಲ, ಒಂದು ವೇಳೆ ಆತ ತಪ್ಪು ಮಾಡಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಿತ್ತು” ಎಂದು ಮೃತನ ಪೋಷಕರು ಕಣ್ಣೀರಿಡುತ್ತಿದ್ದಾರೆ.

​ಪ್ರಸ್ತುತ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಶದಲ್ಲಿರುವ ಆರೋಪಿ ಶಂಕರ್‌ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.


Share News