ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರೂವರೆ ವರ್ಷಗಳಲ್ಲಿ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ವಾಹನಗಳು ನಡೆಸಿರುವ ಸಂಚಾರ ನಿಯಮ ಉಲ್ಲಂಘನೆಯ 82,000ಕ್ಕೂ ಹೆಚ್ಚು ಪ್ರಕರಣಗಳ ₹19.23 ಕೋಟಿ ಬಾಕಿ ದಂಡವನ್ನು ಕೂಡಲೇ ವಸೂಲಿ ಮಾಡಲು ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ (CS) ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಪತ್ರ ಬರೆದಿದ್ದಾರೆ.
ಮಾಧ್ಯಮಗಳಲ್ಲಿ ವರದಿಯಾದ ವರದಿಗಳು ಹಾಗೂ ಒಳಾಡಳಿತ ಇಲಾಖೆ ನೀಡಿದ ಅಧಿಕೃತ ಅಂಕಿಅಂಶಗಳ ಆಧಾರದ ಮೇಲೆ ಈ ಪತ್ರ ಬರೆಯಲಾಗಿದೆ.
ವರದಿಯಲ್ಲಿರುವ ಪ್ರಮುಖ ಅಂಕಿ-ಅಂಶಗಳು:
ಪೋಲಿಸ್ ವಾಹನಗಳ ಉಲ್ಲಂಘನೆ: ಕಳೆದ ಮೂರೂವರೆ ವರ್ಷಗಳಲ್ಲಿ ಪೊಲೀಸ್ ವಾಹನಗಳ ಮೇಲೆ ಒಟ್ಟು 3,366 ಪ್ರಕರಣಗಳು ದಾಖಲಾಗಿವೆ (2023ರಲ್ಲಿ 21, 2024ರಲ್ಲಿ 1,494, 2025ರಲ್ಲಿ 1,251 ಮತ್ತು 2026 ಜುಲೈ ಅಂತ್ಯಕ್ಕೆ 600).
ಇತರ ಸರ್ಕಾರಿ ವಾಹನಗಳು: ವಿವಿಧ ಇಲಾಖೆಗಳ ವಾಹನಗಳ ಮೇಲೆ ಒಟ್ಟು 82,478 ಪ್ರಕರಣಗಳು ದಾಖಲಾಗಿವೆ (2023ರಲ್ಲಿ 1,055, 2024ರಲ್ಲಿ 35,832, 2025ರಲ್ಲಿ 38,282 ಮತ್ತು 2026 ಜುಲೈ ಅಂತ್ಯಕ್ಕೆ 7,309).
ಒಟ್ಟು ಬಾಕಿ ದಂಡ: ಒಟ್ಟು 82,478 ಕ್ಕೂ ಹೆಚ್ಚು ಪ್ರಕರಣಗಳಿಂದ ₹19,23,72,500 ದಂಡದ ಮೊತ್ತ ಪಾವತಿಯಾಗದೆ ಬಾಕಿ ಉಳಿದಿದೆ.
ಮೈಸೂರಿನ ಘಟನೆ: ಮೈಸೂರಿನ ಪೊಲೀಸ್ ಗಸ್ತು ವಾಹನವೊಂದರ ವಿರುದ್ಧವೇ ಕಳೆದ 23 ತಿಂಗಳಲ್ಲಿ ಸೀಟ್ ಬೆಲ್ಟ್ ಧರಿಸದಿದ್ದಕ್ಕೆ 71 ಬಾರಿ ಪ್ರಕರಣ ದಾಖಲಾಗಿ ₹36,500 ದಂಡ ಬಾಕಿ ಇರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಕಾರಣವಾಗಿತ್ತು.
ಪ್ರಾಧಿಕಾರದ ಕಳವಳ ಮತ್ತು ಆಗ್ರಹ:
ಕಾನೂನು ಜಾರಿಗೊಳಿಸುವ ಶಿಸ್ತಿನ ಇಲಾಖೆಯಾದ ಪೊಲೀಸರೇ ಹಾಗೂ ಸರ್ಕಾರಿ ಅಧಿಕಾರಿಗಳೇ ನಿಯಮ ಉಲ್ಲಂಘಿಸಿ ದಂಡ ಪಾವತಿಸದಿದ್ದರೆ, ಸಾರ್ವಜನಿಕರಿಗೆ ನಿಯಮ ಪಾಲಿಸಲು ಹೇಳುವ ನೈತಿಕ ಹಕ್ಕು ಸರ್ಕಾರಕ್ಕೆ ಇರುವುದಿಲ್ಲ. ಸಾರ್ವಜನಿಕರಿಗೊಂದು ಕಾನೂನು, ಸರ್ಕಾರಿ ವಾಹನಗಳಿಗೊಂದು ಕಾನೂನು ಎಂಬ ಭಾವನೆ ಮೂಡುತ್ತಿದ್ದು, ಸಾರ್ವಜನಿಕರಿಂದ ತೀವ್ರ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ವಾಹನಗಳನ್ನು ಪರಿಶೀಲಿಸಿ, ಬಾಕಿ ಇರುವ ದಂಡದ ಮೊತ್ತವನ್ನು ತಕ್ಷಣವೇ ವಸೂಲಿ ಮಾಡಲು ಕಟ್ಟುನಿಟ್ಟಿನ ನಿಯಮಾನುಸಾರ ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

