Share News

ದೊಡ್ಡಬಳ್ಳಾಪುರ: ಮೇಕೆ ವಿಚಾರವಾಗಿ ನಡೆದ ಕ್ಷುಲ್ಲಕ ಗಲಾಟೆ ವ್ಯಕ್ತಿಯೊಬ್ಬರ ಕೊಲೆಯಲ್ಲಿ ಅಂತ್ಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರು ಆರೋಪಿಗಳು ಅಪರಾಧಿಗಳೆಂದು ಸಾಬೀತಾಗಿದ್ದು, ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

​ದೊಡ್ಡಬಳ್ಳಾಪುರದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ನಿರ್ಮಲಾ ಕೆ. ಅವರು ಸೆಪ್ಟೆಂಬರ್ 5, 2026ರಂದು ಈ ತೀರ್ಪು ಪ್ರಕಟಿಸಿದ್ದಾರೆ.

​ಪ್ರಕರಣದ ಮೊದಲ ಆರೋಪಿ ರವಿ ಅಲಿಯಾಸ್ ರವಿಕುಮಾರ್‌ಗೆ ಐಪಿಸಿ 302ರಡಿ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ₹20,000 ದಂಡ ವಿಧಿಸಲಾಗಿದೆ. ಎರಡನೇ ಆರೋಪಿ ಮುನಿಯಪ್ಪನಿಗೆ ಐಪಿಸಿ 323ರಡಿ 6 ತಿಂಗಳ ಸರಳ ಕಾರಾಗೃಹ ಶಿಕ್ಷೆ ಹಾಗೂ ಮೂರನೇ ಆರೋಪಿ ಮುನಿಯಮ್ಮಗೆ 3 ತಿಂಗಳ ಸರಳ ಕಾರಾಗೃಹ ಶಿಕ್ಷೆ ಮತ್ತು ₹1,000 ದಂಡ ವಿಧಿಸಿ ಆದೇಶಿಸಲಾಗಿದೆ.

​ಘಟನೆಯ ವಿವರ:

2021ರ ಆಗಸ್ಟ್ 23ರಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಮನೆಯ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಬಾಲಕಿ ನಯನಾಳಿಗೆ ಆರೋಪಿ ರವಿಕುಮಾರ್ ಅವರ ಮೇಕೆ ಹೋತ ಗುದ್ದಿತ್ತು. ಈ ವೇಳೆ ಮೇಕೆಯನ್ನು ಸರಿಯಾಗಿ ಕಟ್ಟಿ ಹಾಕುವಂತೆ ಪ್ರಶ್ನಿಸಿದ ವಿ.ಟಿ. ಚಂದ್ರಶೇಖರ್ ಅವರೊಂದಿಗೆ ಆರೋಪಿಗಳು ಗಲಾಟೆ ತೆಗೆದು ಬೆದರಿಕೆ ಹಾಕಿದ್ದರು.

​ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದಾಗ, ಆರೋಪಿಗಳಾದ ಮುನಿಯಪ್ಪ ಮತ್ತು ಮುನಿಯಮ್ಮ ಅವರು ಚಂದ್ರಶೇಖರ್ ಅವರನ್ನು ಹಿಡಿದುಕೊಂಡಿದ್ದರೆ, ರವಿಕುಮಾರ್ ಅವರು ಬಲಗೈ ಮುಷ್ಟಿಯಿಂದ ಅವರ ಎದೆ ಭಾಗಕ್ಕೆ ಮೂರು ಬಾರಿ ಬಲವಾಗಿ ಗುದ್ದಿದ್ದರು. ಎದೆಗೆ ಬಿದ್ದ ತೀವ್ರ ಪೆಟ್ಟಿನಿಂದಾಗಿ ಚಂದ್ರಶೇಖರ್ ಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದರು.

​ಪೊಲೀಸ್ ತನಿಖೆ ಹಾಗೂ ವಾದ:

ಅಂದಿನ ತನಿಖಾಧಿಕಾರಿ, ಇನ್ಸ್‌ಪೆಕ್ಟರ್ ಸತೀಶ್ ಬಿ.ಎಸ್. ಅವರು ವೈದ್ಯಕೀಯ ವರದಿಗಳನ್ನಾಧರಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕ ಟಿ. ನಟರಾಜ್ ವಾದ ಮಂಡಿಸಿದ್ದು, ಅಭಿಯೋಜನಾ ಇಲಾಖೆಯ ನಿರ್ದೇಶಕಿ ಶ್ರೀಮತಿ ಅಂಜಲಿ ದೇವಿ ಪ್ರಕರಣದ ಮೇಲುಸ್ತುವಾರಿ ವಹಿಸಿದ್ದರು.


Share News