ಬೆಳಗಾವಿ: ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಯುವಕರನ್ನು ಬೆಳಗಾವಿ ಸಿಸಿಬಿ (CCB) ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಅಕ್ಷಯಕುಮಾರ ಅಂಕಲಗಿ (20), ಆದರ್ಶ ಹಿರೇಮಠ (25) ಹಾಗೂ ಮಣಿಕಂಠ ಉಗರಖೋಡಾ (20) ಎಂದು ಗುರುತಿಸಲಾಗಿದೆ.
ಆರೋಪಿಗಳು ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿರುವ ಕುರಿತು ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿಯನ್ನಾಧರಿಸಿ ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು, ಮೂವರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಗಾಂಜಾ, ಬೈಕ್ ಹಾಗೂ ಮೊಬೈಲ್ ಫೋನ್‌ಗಳು ಸೇರಿದಂತೆ ಒಟ್ಟು ₹1.80 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ತಲೆಮರೆಸಿಕೊಂಡ ಪೂರೈಕೆದಾರ:
ಆರೋಪಿಗಳಿಗೆ ಸುಮಾರು 1 ಕೆಜಿ ಗಾಂಜಾ ಪೂರೈಕೆ ಮಾಡಿದ್ದ ಎನ್ನಲಾದ ಮೈತಾಬ್ ಎಂಬಾತ ಪೊಲೀಸರ ದಾಳಿ ವೇಳೆ ಪರಾರಿಯಾಗಿದ್ದಾನೆ. ಸದ್ಯ ತಲೆಮರೆಸಿಕೊಂಡಿರುವ ಆತನ ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಈ ಕಾರ್ಯಾಚರಣೆಗೆ ಸಂಬಂಧಿಸಿದಂತೆ ನಗರದ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.