*ಬದುಕಿನ ಬಣ್ಣ ಬದಲಾಯಿಸದ ಬಾಲಕ, ಕಾನೂನು ಸಂಘರ್ಷದಲ್ಲಿದ್ದ ಮೊಮ್ಮಗನಿಂದಲೇ ಕಳ್ಳತನ, ಬಾಲ ಮಂಡಳಿಯಿಂದ ಬಾಡಿ ವಾರೆಂಟ್; ಮತ್ತೆ ರಿಟರ್ನ್*
ಬಾಣಸವಾಡಿಯ ಈರಪ್ಪರೆಡ್ಡಿ ಲೇಔಟ್‌ನಲ್ಲಿ ವಾಸವಾಗಿರುವ ದೂರುದಾರರು ತಮ್ಮ ಮನೆಯಲ್ಲಿದ್ದ 199 ಗ್ರಾಂ ಚಿನ್ನಾಭರಣಗಳು ಕಾಣೆಯಾಗಿರುವ ಬಗ್ಗೆ ದೂರನ್ನು ನೀಡಿದ್ದರು. ಪತ್ನಿಯೊಂದಿಗೆ ಆಸ್ಪತ್ರೆಗೆ ತೆರಳಿದ್ದ ಸಮಯದಲ್ಲಿ, ಅವರ ಮೊಮ್ಮಗನು ಮನೆಗೆ ಬಂದು ಬೀರುವಿನಲ್ಲಿದ್ದ ಒಡವೆಗಳನ್ನು ಕಳ್ಳತನ ಮಾಡಿದ್ದನು. ಅನಾರೋಗ್ಯದ ಕಾರಣದಿಂದಾಗಿ ಫಿರ್ಯಾದುದಾರರು ದೂರು ನೀಡಲು ತಡವಾಗಿತ್ತು.
ಪೊಲೀಸರು ನೀಡಿದ ಮಾಹಿತಿಯಂತೆ, ಆರೋಪಿ ಬಾಲಕನು ಈ ಹಿಂದೆ ಲಿಂಗದಹಳ್ಳಿ ಪೊಲೀಸ್ ಠಾಣಾ ಪ್ರಕರಣದಲ್ಲಿ ಭಾಗಿಯಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಬಾಲ ನ್ಯಾಯ ಮಂಡಳಿಯ ವ್ಯಾಪ್ತಿಯಲ್ಲಿದ್ದನು. ಪೊಲೀಸರು ನ್ಯಾಯಾಲಯದಿಂದ ‘ಬಾಡಿ ವಾರೆಂಟ್’ ಪಡೆದು, ಬಾಲಕನನ್ನು ವಶಕ್ಕೆ ಪಡೆದರು. ವಿಚಾರಣೆ ನಡೆಸಿದಾಗ, ಬಾಲಕನು ತಾನು ಕಳ್ಳತನ ಮಾಡಿದ್ದ ಚಿನ್ನಾಭರಣಗಳನ್ನು ಮೈಸೂರಿನ ಜ್ಯುವೆಲ್ಲರಿ ಅಂಗಡಿಯಲ್ಲಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಬಾಲಕನು ನೀಡಿದ ಮಾಹಿತಿಯ ಮೇರೆಗೆ ಮೈಸೂರಿನ ಅಂಗಡಿಯಿಂದ 5,00,000 ಮೌಲ್ಯದ 35 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆಯ ನಂತರ ಬಾಲಕನನ್ನು ಬೆಂಗಳೂರಿನ ಮಡಿವಾಳದಲ್ಲಿರುವ ಬಾಲ ನ್ಯಾಯಮಂಡಳಿಗೆ ಹಾಜರುಪಡಿಸಿ, ನಂತರ ಚಿಕ್ಕಮಗಳೂರು ಜಿಲ್ಲೆಯ ಮಂಡಳಿಗೆ ಹಸ್ತಾಂತರಿಸಲಾಗಿದೆ.
ಪೂರ್ವ ವಿಭಾಗದ ಡಿಸಿಪಿ ಶ್ರೀ. ವಿಕ್ರಮ್ ಅಮಟೆ ಅವರ ಮಾರ್ಗದರ್ಶನದಲ್ಲಿ, ಎಸಿಪಿ ಶ್ರೀ. ಉಮಾಶಂಕರ್ ಎಂ ಹೆಚ್ ಮತ್ತು ಇನ್ಸ್‌ಪೆಕ್ಟರ್ ಶ್ರೀ. ಅರುಣ್ ಸಾಳುಂಕೆ ಅವರ ನೇತೃತ್ವದ ಬಾಣಸವಾಡಿ ಪೊಲೀಸ್ ತಂಡವು ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್