ಬೆಂಗಳೂರು: ಯುವ ಪೀಳಿಗೆಯನ್ನು ಮಾದಕ ದ್ರವ್ಯಗಳ (Drugs) ಪಿಡುಗಿನಿಂದ ರಕ್ಷಿಸಲು ಮತ್ತು ರಾಜ್ಯದಲ್ಲಿ ಡ್ರಗ್ಸ್ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ರಾಜ್ಯ ಸರ್ಕಾರ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರಿನ ವಿಕಾಸಸೌಧದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರ ಸಮ್ಮುಖದಲ್ಲಿ ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾದಕ ದ್ರವ್ಯಗಳ ನಿಯಂತ್ರಣಕ್ಕಾಗಿ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಮತ್ತು ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದು ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಮಾದಕ ದ್ರವ್ಯಗಳ ನಿಯಂತ್ರಣ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಬಾರದು. ಗ್ರಾಮೀಣ ಮಟ್ಟದಲ್ಲಿಯೂ ಇದರ ದುಷ್ಪರಿಣಾಮಗಳ ಬಗ್ಗೆ ವ್ಯಾಪಕ ಅರಿವು ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಶಾಲೆ, ಕಾಲೇಜುಗಳು, ಕಾರ್ಖಾನೆಗಳು ಮಾತ್ರವಲ್ಲದೆ, ಗ್ರಾಮ ಪಂಚಾಯತಿಗಳ ಮೂಲಕ ತಳಮಟ್ಟದಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಚಿವರು ಸೂಚಿಸಿದರು.
ರಾಜ್ಯದಲ್ಲಿ ಮಾದಕ ದ್ರವ್ಯಗಳನ್ನು ಸರಬರಾಜು ಮಾಡುವ ಹಾಗೂ ಇದರ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುವ ಕಿಡಿಗೇಡಿಗಳ ವಿರುದ್ಧ ಪೊಲೀಸ್ ಇಲಾಖೆಯು ಯಾವುದೇ ಮುಲಾಜಿಲ್ಲದೆ, ಕಟ್ಟುನಿಟ್ಟಾದ ಕಾನೂನು ಕ್ರಮ ಕೈಗೊಳ್ಳಬೇಕು. ಡ್ರಗ್ಸ್ ಜಾಲದ ಲಿಂಕ್ಗಳನ್ನು ಪತ್ತೆ ಹಚ್ಚಿ ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಲು ಗೃಹ ಇಲಾಖೆಗೆ ಬಿಗಿ ಸೂಚನೆ ನೀಡಲಾಗಿದೆ.
ಡ್ರಗ್ಸ್ ನಿಯಂತ್ರಣ ಕೇವಲ ಒಂದು ಇಲಾಖೆಯ ಜವಾಬ್ದಾರಿಯಲ್ಲ. ಗೃಹ (ಪೊಲೀಸ್), ಉನ್ನತ ಶಿಕ್ಷಣ, ಪ್ರಾಥಮಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಕಾರ್ಮಿಕ, ಸಮಾಜ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕಿದೆ. ಇದಕ್ಕಾಗಿ ರಾಜ್ಯದ ಸುಧಾರಿತ ತಂತ್ರಜ್ಞಾನ ಮತ್ತು ದತ್ತಾಂಶ ವ್ಯವಸ್ಥೆಗಳನ್ನು (Data Systems) ಬಳಸಿಕೊಳ್ಳಲಾಗುವುದು.
ಇ-ಆಡಳಿತ ಇಲಾಖೆಯ ಮಹತ್ವಾಕಾಂಕ್ಷಿ ‘ಕರ್ನಾಟಕ ರಾಜ್ಯ ವ್ಯಾಪಕ ವಲಯ ಜಾಲ’ (KSWAN 3.0) ಯೋಜನೆಯಡಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳವರೆಗೆ ಸುರಕ್ಷಿತ ಮತ್ತು ಬಿಗಿ ಸಂಪರ್ಕ ಜಾಲವನ್ನು ವಿಸ್ತರಿಸಲಾಗುತ್ತಿದೆ. ಈ ಅತ್ಯಾಧುನಿಕ ತಂತ್ರಜ್ಞಾನ ಮೂಲಸೌಕರ್ಯವನ್ನು ಬಳಸಿಕೊಂಡು ಗ್ರಾಮೀಣ ಮಟ್ಟದಲ್ಲಿ ಅಧಿಕಾರಿಗಳ ಉಸ್ತುವಾರಿ ಹಾಗೂ ಜಾಗೃತಿ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಲಾಗುವುದು.
ಮಾದಕ ದ್ರವ್ಯಗಳ ಮಾರಾಟ ಅಥವಾ ಬಳಕೆಯ ಬಗ್ಗೆ ಸಾರ್ವಜನಿಕರು ಮಾಹಿತಿ ಹಾಗೂ ದೂರುಗಳನ್ನು ನೀಡಲು ರಾಜ್ಯದ ಸುಧಾರಿತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆಯಾದ ‘ಜನಸ್ಪಂದನ’ (iPGRS) ಪ್ಲಾಟ್ಫಾರ್ಮ್ ಅನ್ನು ಮತ್ತಷ್ಟು ಸಶಕ್ತಗೊಳಿಸಲಾಗುವುದು. ನಾಗರಿಕರು ನೀಡುವ ದೂರುಗಳನ್ನು ತಳಮಟ್ಟದ ಅಧಿಕಾರಿಗಳೊಂದಿಗೆ ಮ್ಯಾಪ್ ಮಾಡಿ, ಕಟ್ಟುನಿಟ್ಟಾದ SLA (ಸೇವಾ ಮಟ್ಟದ ಒಪ್ಪಂದ) ಮತ್ತು ನಿಗದಿತ ಕಾಲಮಿತಿಯೊಳಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಮಾದಕ ದ್ರವ್ಯ ಮುಕ್ತ ಅಭಿಯಾನಕ್ಕೆ ಪೂರಕವಾಗಿ ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ‘ಬಿಸಿನೆಸ್ ಪ್ರೊಸೆಸ್ ರಿ-ಇಂಜಿನಿಯರಿಂಗ್’ ಚಟುವಟಿಕೆಗಳನ್ನು ಗೃಹ ಹಾಗೂ ಶಿಕ್ಷಣ ಇಲಾಖೆಗಳಲ್ಲಿ ಇನ್ನಷ್ಟು ವೇಗಗೊಳಿಸಲಾಗುವುದು. ಇದರಿಂದ ಇಲಾಖೆಗಳ ನಡುವಿನ ದತ್ತಾಂಶ ವಿನಿಮಯ ಮತ್ತು ಪರಿಶೀಲನಾ ಪ್ರಕ್ರಿಯೆ ಸರಳವಾಗಲಿದ್ದು, ಅಪರಾಧಗಳನ್ನು ತಡೆಯಲು ಸುಲಭವಾಗಲಿದೆ.
ಡ್ರಗ್ಸ್ ಮುಕ್ತ ಸಮಾಜದ ನಿರ್ಮಾಣಕ್ಕೆ ಕೇವಲ ಕಾನೂನು ಜಾರಿ ಅಷ್ಟೇ ಅಲ್ಲದೆ ಸಾರ್ವಜನಿಕರು, ಯುವ ಸಮುದಾಯ ಹಾಗೂ ತಂತ್ರಜ್ಞಾನದ ಸಮರ್ಪಕ ಬಳಕೆ ಅತ್ಯಂತ ಅವಶ್ಯಕವಾಗಿದೆ. ಗೃಹ ಇಲಾಖೆಯ ಕಾನೂನು ಜಾರಿ ವ್ಯವಸ್ಥೆಯೊಂದಿಗೆ ಸರ್ಕಾರದ ವಿವಿಧ ಇಲಾಖೆಗಳನ್ನು ಸಮನ್ವಯಗೊಳಿಸಿ ಮಾದಕ ದ್ರವ್ಯ ಮುಕ್ತ ಕರ್ನಾಟಕ ನಿರ್ಮಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.