Share News

ರಾಮನಗರ (ಬಿಡದಿ): ಬಹುನಿರೀಕ್ಷಿತ ಬಿಡದಿ ಟೌನ್‌ಶಿಪ್ ಯೋಜನೆಗೆ (Bidadi Township Project) ಸಂಬಂಧಿಸಿದಂತೆ ಜಂಟಿ ಭೂಮಾಪನ (JMC) ಕಾರ್ಯದ ವೇಳೆ ಉಂಟಾದ ತೀವ್ರ ಜಟಾಪಟಿ ಹಾಗೂ ಸಂಘರ್ಷ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮಂಡಲಹಳ್ಳಿಯಲ್ಲಿ ಜೆಎಂಸಿ ಸರ್ವೆಗೆ ತಡೆಯೊಡ್ಡಿ, ಕಂದಾಯ ಇಲಾಖೆಯ ಅಧಿಕಾರಿಗಳ ಮೇಲೆ ದೈಹಿಕ ಹಲ್ಲೆ ಹಾಗೂ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ೨೦ಕ್ಕೂ ಹೆಚ್ಚು ರೈತರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.

​ಅಧಿಕಾರಿಗಳ ಮೇಲೆ ಅಟ್ಟಾಡಿಸಿ ಹಲ್ಲೆ:

ಬಿಡದಿ ಟೌನ್‌ಶಿಪ್ ಯೋಜನೆಯ ವ್ಯಾಪ್ತಿಗೆ ಬರುವ ಮಂಡಲಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಜೆಎಂಸಿ ಸರ್ವೆ ನಡೆಸಲು ಕಂದಾಯ ಅಧಿಕಾರಿಗಳು ಆಗಮಿಸಿದಾಗ ಸ್ಥಳೀಯ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಪ್ರತಿಭಟನೆ ಕೈ ಮೀರಿ ಹೋಗಿದ್ದು, ಸರ್ವೆಗೆ ತಡೆ ನೀಡಿದ ರೈತರ ಗುಂಪು ಅಧಿಕಾರಿಗಳನ್ನು ಅಟ್ಟಾಡಿಸಿ ಅವರ ಮೇಲೆ ದೈಹಿಕ ಹಲ್ಲೆ ನಡೆಸಿದೆ. ಅಷ್ಟೇ ಅಲ್ಲದೆ, ಅಧಿಕಾರಿಗಳು ಬಂದಿದ್ದ ಸರ್ಕಾರಿ ವಾಹನಗಳ ಮೇಲೆಯೂ ದಾಳಿ ನಡೆಸಿ ಹಾನಿ ಮಾಡಿರುವುದಾಗಿ ಕಂದಾಯ ಅಧಿಕಾರಿಗಳು ದೂರಿನಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಡದಿ ಪೊಲೀಸರು ಸರ್ಕಾರಿ ಕೆಲಸಕ್ಕೆ ಅಡ್ಡಿ, ಹಲ್ಲೆ, ಸಾರ್ವಜನಿಕ ಆಸ್ತಿಗೆ ಹಾನಿ ಹಾಗೂ ಜೀವ ಬೆದರಿಕೆ ಆರೋಪದಡಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದಾರೆ.

ನಿನ್ನೆ ಘಟನಾ ಸ್ಥಳಕ್ಕೆ ಕೇಂದ್ರ ವಲಯದ ಐಜಿಪಿ ಗಿರೀಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದರ ಬೆನ್ನಲ್ಲೇ, ಜಿಲ್ಲಾಧಿಕಾರಿಗಳೊಂದಿಗೆ ಸರ್ವೆ ಕುರಿತು ಸಮಗ್ರ ಮಾಹಿತಿ ಪಡೆದಿರುವ ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶ್ರೀನಿವಾಸ್ ಗೌಡ ಅವರು ಇಂದು ಮತ್ತೆ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಸದ್ಯ ಇಂದು ಭಾರೀ ಪೊಲೀಸ್ ಬಂದೋಬಸ್ತ್ ನಡುವೆಯೇ ಸರ್ವೆ ಕಾರ್ಯ ಮುಂದುವರಿದಿದ್ದು, ಸ್ಥಳದಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

“ನಮಗೆ ಸೂಕ್ತ ಹಿಂಬರಹ (ಲಿಖಿತ ಭರವಸೆ) ಕೊಡುವವರೆಗೂ ಯಾವುದೇ ಕಾರಣಕ್ಕೂ ಸರ್ವೆ ಮಾಡಲು ಬಿಡುವುದಿಲ್ಲ” ಎಂದು ಸ್ಥಳೀಯ ರೈತರು ಹಾಗೂ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಸ್ಥಳಕ್ಕೆ ಸಂಬಂಧಪಟ್ಟ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಬೇಕು ಎಂದು ಪಟ್ಟು ಹಿಡಿದಿರುವ ರೈತರು, ಈ ಭೂಸ್ವಾಧೀನದ ಸಮಸ್ಯೆ ಸಂಪೂರ್ಣ ಇತ್ಯರ್ಥಗೊಳ್ಳುವವರೆಗೂ ಯಾವುದೇ ರೀತಿಯ ಸರ್ವೆ ಕಾರ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

 


Share News