ಗುಂಡ್ಲುಪೇಟೆ : ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಕುಂದುಕೆರೆ ವಲಯಕ್ಕೆ ಒಳಪಡುವ ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೋಂಸ್ಟೇಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಜಿಂಕೆಯ ಕೊಂಬು, ತಲೆಬುರುಡೆ ಹಾಗೂ ಅಪಾಯಕಾರಿ ತಂತಿ ಬೇಲಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ರೈತ ಸಂಘ ಹಾಗೂ ಅರಣ್ಯಾಧಿಕಾರಿಗಳಿಂದ ಜಂಟಿ ದಾಳಿ
ಸದರಿ ಹೋಂಸ್ಟೇನಲ್ಲಿ ಅರಣ್ಯ ಕಾನೂನುಗಳನ್ನು ಗಾಳಿಗೆ ತೂರಿ ವನ್ಯಜೀವಿಗಳ ಬೇಟೆ ಹಾಗೂ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರಾದ ಶಶಿ ಬೇರಂಬಾಡಿ, ಮಧು ಕೆಬ್ಬೆಪುರ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿದರು. ಈ ತಪಾಸಣೆ ವೇಳೆ ಹೋಂಸ್ಟೇ ಆವರಣದಲ್ಲಿ ಬಚ್ಚಿಟ್ಟಿದ್ದ ಜಿಂಕೆಯ ಕೊಂಬು, ತಲೆಬುರುಡೆ ಹಾಗೂ ಕಣ್ಣು ತಪ್ಪಿಸಿ ಅಳವಡಿಸಲಾಗಿದ್ದ ತಂತಿ ಬೇಲಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ರೆಸಾರ್ಟ್, ಹೋಂಸ್ಟೇಗಳ ಮೇಲೆ ನಿರಂತರ ತಪಾಸಣೆಗೆ ಆಗ್ರಹ
ವನ್ಯಜೀವಿ ಸಂಪತ್ತಿಗೆ ಧಕ್ಕೆ ತರುತ್ತಿರುವ ಈ ಘಟನೆಯನ್ನು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ತಪ್ಪಿತಸ್ಥರು ಹಾಗೂ ಹೋಂಸ್ಟೇ ಮಾಲೀಕರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಬಂಡಿಪುರ ಅರಣ್ಯದ ಅಂಚಿನಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳ ಮೇಲೆ ಇಲಾಖೆಯು ನಿರಂತರ ತಪಾಸಣೆ ನಡೆಸಿ, ವನ್ಯಜೀವಿ ವಿರೋಧಿ ಕೃತ್ಯಗಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬೃಹತ್ ಪ್ರತಿಭಟನೆಯ ಎಚ್ಚರಿಕೆ
ಕಾಡಂಚಿನ ಪ್ರದೇಶಗಳಲ್ಲಿ ಇಂತಹ ಕಾನೂನುಬಾಹಿರ ಕೃತ್ಯಗಳು ಮರುಕಳಿಸದಂತೆ ಅರಣ್ಯ ಇಲಾಖೆಯು ಕಟ್ಟುನಿಟ್ಟಿನ ಗಸ್ತು ಮತ್ತು ಕಾವಲು ವ್ಯವಸ್ಥೆಯನ್ನು ಕೈಗೊಳ್ಳಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಸ್ಥಳೀಯ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬೃಹತ್ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತ ಮುಖಂಡ ಮಧು ಕೆಬ್ಬೆಪುರ ಎಚ್ಚರಿಕೆ ನೀಡಿದ್ದಾರೆ.