ಮುಂಬೈ: ಹುಟ್ಟುಹಬ್ಬದ ಆಚರಣೆಯ ವೇಳೆ ಸತ್ತ ಹಲ್ಲಿ ಬಿದ್ದಿದ್ದ ಕೇಕ್ ಸೇವಿಸಿ ಏಳು ಮಕ್ಕಳು ಸೇರಿದಂತೆ 11 ಮಂದಿ ತೀವ್ರ ಆಹಾರ ವಿಷಪ್ರಾಶನದಿಂದ (ಫುಡ್ ಪಾಯ್ಸನಿಂಗ್) ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ.
ನಲಸೋಪರಾ ಪೂರ್ವದ ಟಕಿಪಾಡಾ ಪ್ರದೇಶದಲ್ಲಿ ಶನಿವಾರ ಮಹಿಳೆಯೊಬ್ಬರ ಜನ್ಮದಿನದ ಅಂಗವಾಗಿ ಸ್ಥಳೀಯ ಬೇಕರಿಯಿಂದ ಕೇಕ್ ತರಿಸಲಾಗಿತ್ತು. ಕೇಕ್ ಬಡಿಸಿದ ತಟ್ಟೆಯಲ್ಲಿ ಸತ್ತ ಹಲ್ಲಿ ಇರುವುದನ್ನು ಗಮನಿಸಿದ ಅತಿಥಿಗಳು ಆತಂಕಗೊಂಡಿದ್ದಾರೆ.
ತೀವ್ರ ಹೊಟ್ಟೆನೋವು, ವಾಂತಿ:
ಕೇಕ್ ಸೇವಿಸಿದ ಕೆಲವೇ ಕ್ಷಣಗಳಲ್ಲಿ ಎರಡೂವರೆ ವರ್ಷದ ಮಗು, ನಾಲ್ವರು ಮಹಿಳೆಯರು ಹಾಗೂ ಏಳು ಮಕ್ಕಳು ತೀವ್ರ ಹೊಟ್ಟೆನೋವು, ಎದೆ ಉರಿ ಮತ್ತು ವಾಂತಿಯಿಂದ ಬಳಲಿದ್ದಾರೆ. ಕೂಡಲೇ ಅಸ್ವಸ್ಥಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ತುರ್ತು ಆರೈಕೆಗಾಗಿ ದಾಖಲಿಸಲಾಗಿದೆ. ಸದ್ಯ ಬಹುತೇಕರ ಸ್ಥಿತಿ ಸ್ಥಿರವಾಗಿದ್ದು, ತೀವ್ರ ನಿಗಾದ ಅಗತ್ಯವಿರುವ ಮೂವರು ಮಕ್ಕಳನ್ನು ಐಸಿಯು (ICU) ವಿಭಾಗಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೇಕರಿ ವಿರುದ್ಧ ಎಫ್‌ಡಿಎ ತನಿಖೆ:
ಘಟನೆಗೆ ಸಂಬಂಧಿಸಿದಂತೆ ಆಹಾರ ಮತ್ತು ಔಷಧ ಆಡಳಿತ (FDA) ಹಾಗೂ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕೇಕ್ ಪೂರೈಸಿದ ಬೇಕರಿಯ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಕೇಕ್‌ನಲ್ಲಿ ಸತ್ತ ಹಲ್ಲಿ ಕಂಡುಬಂದಿರುವುದಾಗಿ ಸಂತ್ರಸ್ತರು ಆರೋಪಿಸಿದ್ದು, ಆಹಾರ ವಿಷಪ್ರಾಶನಕ್ಕೆ ನಿಖರ ಕಾರಣವನ್ನು ಕಂಡುಕೊಳ್ಳಲು ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.