ಬೆಂಗಳೂರು : ಬಳ್ಳಾರಿ ಜಿಲ್ಲೆಯ ಕಂಪ್ಲಿ ಮೂಲದ ಮೂರು ವರ್ಷದ ಬಾಲಕ ತನವ್ ಮೋಹನ್ ಕುಮಾರ್, ಅತ್ಯಂತ ಕಿರಿಯ ವಯಸ್ಸಿನಲ್ಲಿ 6೦೦ ಮೀಟರ್ ಓಟವನ್ನು ಪೂರ್ಣಗೊಳಿಸುವ ಮೂಲಕ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ (IBR) ನಲ್ಲಿ ತನ್ನ ಹೆಸರು ನಮೂದಿಸಿ ರಾಷ್ಟ್ರೀಯ ಮಟ್ಟದಲ್ಲಿ ಹೊಸ ದಾಖಲೆ ಬರೆದಿದ್ದಾನೆ.
ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಹಾಗೂ ಸೌಮ್ಯಶ್ರೀ ಮೋಹನ್ ಕುಮಾರ್ ದಂಪತಿಯ ಪುತ್ರನಾದ ತನವ್ (3 ವರ್ಷ 10 ತಿಂಗಳು), ಜುಲೈ 5 ರಂದು ಬೆಂಗಳೂರಿನ ಜಿಕೆವಿಕೆ (GKVK) ಆವರಣದಲ್ಲಿ ನಡೆದ ಓಟದಲ್ಲಿ 6೦೦ ಮೀಟರ್ ಅಂತರವನ್ನು ಕೇವಲ 5 ನಿಮಿಷ 44 ಸೆಕೆಂಡುಗಳಲ್ಲಿ ಕ್ರಮಿಸಿದ್ದಾನೆ.
ಐಬಿಆರ್ ಅಧಿಕೃತ ದೃಢೀಕರಣ:
ತನವ್ ಸಾಧನೆಯನ್ನು ಪರಿಶೀಲಿಸಿದ ಐಬಿಆರ್ ಮಂಡಳಿಯು ಜುಲೈ 31 ರಂದು ಈ ದಾಖಲೆಯನ್ನು ಅಧಿಕೃತವಾಗಿ ದೃಢೀಕರಿಸಿದೆ. ಮಗುವಿನ ಈ ಅಸಾಧಾರಣ ಸಾಧನೆಗೆ ಐಬಿಆರ್ ಸಂಸ್ಥೆಯು ಪ್ರಮಾಣಪತ್ರ, ಪದಕ ಹಾಗೂ ದಾಖಲೆ ಪುಸ್ತಕವನ್ನು ನೀಡಿ ಗೌರವಿಸಿದೆ.
ಪ್ರಸ್ತುತ ಬೆಂಗಳೂರಿನ ಜ್ಞಾನ ದೀಪಿಕಾ ಭಾರ್ಗವಿ ಎಜುಕೇಶನ್ ಟ್ರಸ್ಟ್ (JDBE) ಶಾಲೆಯಲ್ಲಿ ಪ್ರಿ-ಕೆಜಿ ವ್ಯಾಸಂಗ ಮಾಡುತ್ತಿರುವ ತನವ್‌ನ ಈ ಸಾಧನೆಗೆ ತಂದೆ ಮೋಹನ್ ಕುಮಾರ್ ದಾನಪ್ಪ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರು , ತಾಯಿ ಸೌಮ್ಯಶ್ರೀ ಮೋಹನ್ ಕುಮಾರ್,, ಅಜ್ಜ (ರಾಜ್ಯ ದಿಶಾ ಸಮಿತಿ ಸದಸ್ಯ ಎ.ಸಿ. ದಾನಪ್ಪ), ಅಜ್ಜಿ (ಕೃಷಿ ಪಂಡಿತೆ ಪ್ರಶಸ್ತಿ ಪುರಸ್ಕೃತೆ ಅಂಡಿ ಹುಲಿಗೆಮ್ಮ), ಕುಟುಂಬಸ್ಥರು ಹಾಗೂ ಶಾಲೆಯ ಆಡಳಿತ ಮಂಡಳಿ ತೀವ್ರ ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

