ಬೆಂಗಳೂರು: ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಸಾರ್ವಜನಿಕರ ಜೀವಕ್ಕೆ ಕುತ್ತು ತರುತ್ತಿರುವ ವೀಲಿಂಗ್ ಪುಂಡರಿಗೆ ಕೆ.ಆರ್.ಪುರ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಭರ್ಜರಿ ಬಿಸಿ ಮುಟ್ಟಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಮೇಡಹಳ್ಳಿ ಬ್ರಿಜ್ ಮೇಲೆ ಭೀಕರವಾಗಿ ವೀಲಿಂಗ್ ಮಾಡುತ್ತಾ ಫೋಟೋ ಮತ್ತು ವಿಡಿಯೋ ಶೂಟ್ ನಡೆಸುತ್ತಿದ್ದ ಕಿಲಾಡಿ ಬೈಕ್ ಸವಾರನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೈಕ್‌ನಲ್ಲಿ ವೀಲಿಂಗ್ ಮಾಡುತ್ತಿದ್ದ ಸ್ಟೀಫನ್ (21) ಬಂಧಿತ ಆರೋಪಿಯಾಗಿದ್ದಾನೆ.
ಕಳೆದ ಜೂನ್ 11ರ ಮುಂಜಾನೆ 1:30ರ ಸುಮಾರಿಗೆ ಈ ಘಟನೆ ನಡೆದಿದೆ. ಆರೋಪಿ ಸ್ಟೀಫನ್ ಹಾಗೂ ಆತನ ಗ್ಯಾಂಗ್ ಆವಲಹಳ್ಳಿಯಿಂದ ಕೆ.ಆರ್.ಪುರದವರೆಗೂ ರಾಷ್ಟ್ರೀಯ ಹೆದ್ದಾರಿಯಲ್ಲೇ ಅಪಾಯಕಾರಿಯಾಗಿ ವೀಲಿಂಗ್ ಮಾಡಿಕೊಂಡು ಬಂದಿದ್ದಾರೆ. ಇವರ ಪುಂಡಾಟಿಕೆಗೆ ಸಾಥ್ ನೀಡಿದ್ದ ಎಲ್ಲೋ ಬೋರ್ಡ್ (ಟ್ಯಾಕ್ಸಿ) ಕಾರಿನ ಚಾಲಕ, ಬ್ರಿಜ್ ಮೇಲೆ ಕಾರು ಚಲಾಯಿಸುತ್ತಲೇ ವೀಲಿಂಗ್ ದೃಶ್ಯಗಳನ್ನು ವೃತ್ತಿಪರ ಕ್ಯಾಮೆರಾದಲ್ಲಿ ಫೋಟೋ ಹಾಗೂ ವಿಡಿಯೋ ಶೂಟ್ ಮಾಡಿಕೊಡುತ್ತಿದ್ದ ಎನ್ನಲಾಗಿದೆ.
ಇದೇ ವೇಳೆ ಆ ರಸ್ತೆಯಲ್ಲಿ ಚಲಿಸುತ್ತಿದ್ದ ಮತ್ತೊಂದು ಸಾರ್ವಜನಿಕರ ಕಾರಿನಲ್ಲಿದ್ದವರು ಈ ಇಡೀ ಪುಂಡಾಟಿಕೆಯನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ರಹಸ್ಯವಾಗಿ ಸೆರೆಹಿಡಿದಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಕೆ.ಆರ್.ಪುರ ಸಂಚಾರಿ ಪೊಲೀಸರು, ತನಿಖೆ ಆರಂಭಿಸಿದ್ದರು. ಸಾರ್ವಜನಿಕರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ ವಿಡಿಯೋದಲ್ಲಿ ವೀಲಿಂಗ್ ಮಾಡುತ್ತಿದ್ದ ಬೈಕ್ ಹಾಗೂ ಅದಕ್ಕೆ ಸಹಾಯ ಮಾಡುತ್ತಿದ್ದ ಎಲ್ಲೋ ಬೋರ್ಡ್ ಕಾರಿನ ನಂಬರ್ ಪತ್ತೆ ಹಚ್ಚಲು ಪೊಲೀಸರಿಗೆ ದೊಡ್ಡ ಸಹಾಯವಾಗಿದೆ.
ವೈರಲ್ ವಿಡಿಯೋ ಹಾಗೂ ಲೊಕೇಶನ್ ಆಧರಿಸಿ ಕಾರ್ಯಾಚರಣೆ ನಡೆಸಿದ ಕೆ.ಆರ್.ಪುರ ಟ್ರಾಫಿಕ್ ಪೊಲೀಸರು, ಬೈಕ್ ಸವಾರ 21 ವರ್ಷದ ಸ್ಟೀಫನ್‌ನನ್ನು ಪತ್ತೆಹಚ್ಚಿ ಹೆಡೆಮುರಿ ಕಟ್ಟಿದ್ದಾರೆ. ಈತನ ವಿರುದ್ಧ ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡಿರುವ ಹಿನ್ನೆಲೆಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇನ್ನು ವೀಲಿಂಗ್ ಪುಂಡನಿಗೆ ವಿಡಿಯೋ ಶೂಟ್ ಮಾಡಲು ಸಹಾಯ ಮಾಡುತ್ತಿದ್ದ ಎಲ್ಲೋ ಬೋರ್ಡ್ ಕಾರಿನ ಚಾಲಕನನ್ನು ಠಾಣೆಗೆ ಕರೆಸಿ ಭಾರಿ ಮೊತ್ತದ ದಂಡ (Fine) ವಿಧಿಸಿ ಪೊಲೀಸರು ವಾರ್ನಿಂಗ್ ನೀಡಿ ಕಳುಹಿಸಿದ್ದಾರೆ.
ರಾತ್ರಿ ವೇಳೆಯಲ್ಲಿ ಇಂತಹ ವೀಲಿಂಗ್ ಪುಂಡಾಟಿಕೆ ನಡೆಸಿದರೆ ಕಠಿಣ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಕೆ.ಆರ್.ಪುರ ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.