Share News

ಮೈಸೂರು: ಅಕ್ರಮವಾಗಿ ಆನೆ ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಜಾಲವೊಂದನ್ನು ಮೈಸೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಭೇದಿಸಿದ್ದಾರೆ. ಮೈಸೂರು ಸಮೀಪದ ಚಿಕ್ಕಹಳ್ಳಿ ಗ್ರಾಮದ ವ್ಯಾಪ್ತಿಯ ಶ್ರೀ ರಾಮ ಬಡಾವಣೆಯ ಮೊಸಂಬಾಯನಹಳ್ಳಿ ರಸ್ತೆಯಲ್ಲಿ ಈ ಯಶಸ್ವಿ ದಾಳಿ ನಡೆದಿದೆ.

​ಪ್ರಕರಣಕ್ಕೆ ಸಂಬಂಧಿಸಿದಂತೆ ಹುಣಸೂರು ತಾಲೂಕಿನ ಬಲ್ಲೇನಹಳ್ಳಿಯ ರವಿಚಂದ್ರ ಹಾಗೂ ಮೈಸೂರಿನ ಕ್ಯಾತಮಾರನಹಳ್ಳಿಯ ರಾಜೇಂದ್ರ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೃತ್ಯದಲ್ಲಿದ್ದ ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡು ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ಮುಂದುವರಿದಿದೆ.

​ಬೈಕ್, ಮೊಬೈಲ್ ಸಹಿತ ಆನೆ ದಂತ ಜಪ್ತಿ

​ಬಂಧಿತ ಆರೋಪಿಗಳಿಂದ ಒಂದು ಆನೆ ದಂತ, ಅದನ್ನು ಸಾಗಿಸಲು ಬಳಸಿದ್ದ ಬೈಕ್, ಬ್ಯಾಗ್‌ಗಳು ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

​ಅಧಿಕಾರಿಗಳ ಮಾರ್ಗದರ್ಶನದಲ್ಲಿ ಯಶಸ್ವಿ ಕಾರ್ಯಾಚರಣೆ

​ಚಾಮರಾಜನಗರ ಸಿಸಿಎಫ್ ಡಾ. ಮಾಲತಿಪ್ರಿಯಾ ಹಾಗೂ ಮೈಸೂರು ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ. ವೈ. ರಾಜು ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

​ದಾಳಿಯಲ್ಲಿ ಆನೆ ಕಾರ್ಯಪಡೆಯ ಎಸಿಎಫ್ ರುದ್ರೇಶ್ ಜಿ., ವಲಯ ಅರಣ್ಯಾಧಿಕಾರಿ (RFO) ಸುರೇಂದ್ರ ಕೆ., ಉಪ ವಲಯ ಅರಣ್ಯಾಧಿಕಾರಿಗಳಾದ (DRFO) ಕನ್ನಿಕಾ ಟಿ.ಸಿ., ಸುಮಲತ ಎ.ಎಂ., ಹೇಮಂತ್ ಕುಮಾರ್ ಹೆಚ್.ಬಿ., ಸುರೇಶ್ ಕೆ., ಹಾಗೂ ಗಸ್ತು ಅರಣ್ಯ ಪಾಲಕರಾದ ತಿರುಪತಿ ಪೂಜಾರ, ಸಿದ್ದರಾಜಶೆಟ್ಟಿ, ಇಮಾಮ ಸಾಬ ಸಗರಿ ಅವರು ಸಕ್ರಿಯವಾಗಿ ಭಾಗವಹಿಸಿದ್ದರು.


Share News