ಮಂಗಳೂರು: ನಗರದಲ್ಲಿ ಹೆಚ್ಚುತ್ತಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣಗಳನ್ನು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ವಿಶೇಷ ತಂಡವು ಯಶಸ್ವಿಯಾಗಿ ಭೇದಿಸಿದೆ. ಕಾರ್ಯಾಚರಣೆಯಲ್ಲಿ ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಮೂವರು ಬಾಲಕರು ಸೇರಿದಂತೆ ಒಟ್ಟು 7 ಮಂದಿಯನ್ನು ಪತ್ತೆಹಚ್ಚಲಾಗಿದ್ದು, 4 ಮಂದಿ ಪ್ರಮುಖ ಆರೋಪಿಗಳನ್ನು ಬಂಧಿಸಿ, 3 ಬಾಲಕರನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರಿಂದ ಕಳವು ಮಾಡಿದ್ದ 6 ಬೈಕ್ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 3 ಬೈಕ್ಗಳು ಸೇರಿದಂತೆ ಒಟ್ಟು ₹4.50 ಲಕ್ಷ ಮೌಲ್ಯದ 9 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೆಟಿಎಂ, ರಾಯಲ್ ಎನ್ಫೀಲ್ಡ್ನಂತಹ ದುಬಾರಿ ಬೈಕ್ಗಳೇ ಟಾರ್ಗೆಟ್!
ಬಂಧಿತ ಆರೋಪಿಗಳು ಹಾಗೂ ಬಾಲಕರು ಐಷಾರಾಮಿ ಜೀವನ ನಡೆಸುವ ಚಟಕ್ಕೆ ಬಿದ್ದು ಬೈಕ್ ಕಳವು ಕೃತ್ಯಕ್ಕೆ ಇಳಿಯುತ್ತಿದ್ದರು. ಪ್ರಮುಖವಾಗಿ KTM ಡ್ಯೂಕ್, ಯಮಹಾ FZ, ಹಾಗೂ ರಾಯಲ್ ಎನ್ಫೀಲ್ಡ್ ನಂತಹ ಯುವಕರ ನೆಚ್ಚಿನ ಹಾಗೂ ದುಬಾರಿ ಬೆಲೆಯ ಬೈಕ್ಗಳನ್ನೇ ಟಾರ್ಗೆಟ್ ಮಾಡಿ ಕಳವು ಮಾಡುತ್ತಿದ್ದರು. ಬಳಿಕ ಅವುಗಳನ್ನು ಅತ್ಯಂತ ಕಡಿಮೆ ಬೆಲೆಗೆ ಸಾರ್ವಜನಿಕರಿಗೆ ಮಾರಾಟ ಮಾಡಿ ಮೋಜು-ಮಸ್ತಿ ಮಾಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
6 ಪ್ರಕರಣಗಳು ಭೇದಿಸಿದ ಪೊಲೀಸರು:
ಈ ಜಾಲದ ಬಂಧನದಿಂದಾಗಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 4 ಪ್ರಕರಣಗಳು ಹಾಗೂ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 2 ಪ್ರಕರಣಗಳು ಸೇರಿದಂತೆ ಒಟ್ಟು 6 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಯಶಸ್ವಿಯಾಗಿ ಭೇದಿಸಲ್ಪಟ್ಟಿವೆ.
ಚುರುಕಿನ ಕಾರ್ಯಾಚರಣೆ:
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳವು ತಡೆಯುವ ನಿಟ್ಟಿನಲ್ಲಿ ನೀಡಿದ ಮಾರ್ಗದರ್ಶನದಂತೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ಪೊಲೀಸ್ ತಂಡವು ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
Arakshakara Times Media
Related posts
