Share News

ಮುಳಬಾಗಿಲು: ನಗರದ ನಂಗಲಿ ರಸ್ತೆಯಲ್ಲಿರುವ ಟೌನ್ ಕ್ಲಬ್‌ನಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಜೂಜಾಟ (ಇಸ್ಪೀಟ್) ನಡೆಸುತ್ತಿದ್ದ ಅಡ್ಡೆ ಮೇಲೆ ಮುಳಬಾಗಿಲು ನಗರ ಠಾಣೆ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ 20 ಮಂದಿ ಜೂಜುಕೋರರನ್ನು ಬಂಧಿಸಲಾಗಿದ್ದು, ಅವರಿಂದ ₹61,640 ನಗದು ಹಣ ಹಾಗೂ ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

​ದಿನಾಂಕ 24/10/2026 ರಂದು ದೊರೆತ ಖಚಿತ ಮಾಹಿತಿ ಆಧಾರದ ಮೇರೆಗೆ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಮೊ.ಸಂ. 220/2026) ದಾಖಲಾಗಿತ್ತು. ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕಿ (SP) ಕಾನಿಕಾ ಸಿಕ್ರಿವಾಲ್, ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ (Addl SP) ಜಗದೀಶ್ ಅವರ ಮಾರ್ಗದರ್ಶನದಲ್ಲಿ, ಮುಳಬಾಗಿಲು ಉಪ ವಿಭಾಗದ ಎಎಸ್ಪಿ (ASP) ಮನೀಷಾ, ಐಪಿಎಸ್ ಅವರ ನೇತೃತ್ವದಲ್ಲಿ ವಿಶೇಷ ಪಡೆ ಈ ದಾಳಿ ನಡೆಸಿದೆ.

​ಕಾರ್ಯಾಚರಣೆಯಲ್ಲಿ ಮುಳಬಾಗಿಲು ನಗರ ಪೊಲೀಸ್ ಇನ್‌ಸ್ಪೆಕ್ಟರ್ ಸುಧಾಕರ್ ರೆಡ್ಡಿ, ಪ್ರೊಬೇಷನರಿ ಪಿಎಸ್‌ಐ ನಾಗರತ್ನ, ಪಿಎಸ್‌ಐ ಶ್ರೀನಾಥ್, ಎಎಸ್‌ಐ ಮಂಜುನಾಥ ಹಾಗೂ ಠಾಣೆಯ ಸಿಬ್ಬಂದಿ ಭಾಗವಹಿಸಿದ್ದರು.

​ಬಂಧಿತ ಆರೋಪಿಗಳು:

ಮಂಜುನಾಥ, ರವಿ, ಕಾಶಿನಾಥ್, ಸೋಮಶೇಖರ್, ಶ್ರೀನಿವಾಸ, ಸುಬ್ರಮಣಿ, ಲಕ್ಷ್ಮೀನಾರಾಯಣ, ವೆಂಕಟೇಶಪ್ಪ, ಸತೀಶ್, ನಾರಾಯಣಚಾರಿ, ಕೃಷ್ಣ, ಚಿನ್ನಣ್ಣ, ಈಶ್ವರ್, ಹನುಮಪ್ಪ, ಭಾಸ್ಕರ್, ರಾಜಣ್ಣ, ಅಂಬರೀಶ್, ರವಿಕುಮಾರ್, ಮಂಜುನಾಥ್ ಹಾಗೂ ಅಕ್ರಂ ಬಂಧಿತ ಆರೋಪಿಗಳಾಗಿದ್ದಾರೆ.

​ಪೊಲೀಸ್ ಕರ್ತವ್ಯಕ್ಕೆ ಅಡ್ಡಿ: ಮತ್ತೊಂದು ಕೇಸ್ ದಾಖಲು

​ಇದೇ ವೇಳೆ, ಬಂಧಿತ ಆರೋಪಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ, ಆರೋಪಿ ಲಕ್ಷ್ಮೀನಾರಾಯಣ ಎಂಬಾತನ ಪತ್ನಿ ವಾಣಿ ಹಾಗೂ ಮಕ್ಕಳಾದ ಚರಣ್ ಮತ್ತು ಭಾರ್ಗವ್ ಎಂಬುವವರು ಠಾಣೆಗೆ ಆಗಮಿಸಿ ಪೊಲೀಸರ ಕರ್ತವ್ಯಕ್ಕೆ ತೀವ್ರ ಅಡ್ಡಿಪಡಿಸಿದ್ದಾರೆ. ಕರ್ತವ್ಯದಲ್ಲಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಆರೋಪಿಯನ್ನು ಪ್ರಕರಣದಿಂದ ಕೈಬಿಡದಿದ್ದರೆ ಸ್ಥಳದಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

​ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧವೂ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ (ಮೊ.ಸಂ. 221/2026) ದಾಖಲಿಸಲಾಗಿದೆ.

​ಅಕ್ರಮ ಜೂಜಾಟದ ವಿರುದ್ಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಮುಳಬಾಗಿಲು ಉಪ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.


Share News