ಆನೇಕಲ್: ತಾಲೂಕಿನ ಮರಸೂರು ಗೇಟ್ ಬಳಿಯ ಬಾರ್‌ಗಳ ಮುಂಭಾಗದಲ್ಲಿ ರಸ್ತೆ ಬದಿಯಲ್ಲೇ ನೂರಾರು ಮಂದಿ ಕುಳಿತು ಮದ್ಯ ಸೇವಿಸುತ್ತಿದ್ದು, ಸಾರ್ವಜನಿಕರ ಸಂಚಾರಕ್ಕೆ ತೀವ್ರ ಕಿರಿಕಿರಿ ಉಂಟಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಹಾರ, ಜಾರ್ಖಂಡ್, ಅಸ್ಸಾಂ ಹಾಗೂ ಮಣಿಪುರ ಸೇರಿದಂತೆ ವಿವಿಧ ಹೊರರಾಜ್ಯಗಳಿಂದ ಆಗಮಿಸಿರುವ ಕಾರ್ಮಿಕರು ‘ಕರ್ಮಯೋಗ’ ಹಬ್ಬದ ಪೂಜೆ ಮುಗಿಸಿದ ಬಳಿಕ ಬಾರ್‌ಗಳ ಮುಂದೆ ಗುಂಪು ಗುಂಪಾಗಿ ಸೇರಿ ರಸ್ತೆ ಬದಿಯಲ್ಲೇ ಮದ್ಯ ಸೇವಿಸಿದ್ದಾರೆ ಎನ್ನಲಾಗಿದೆ.
ಮಹಿಳೆಯರು, ಮಕ್ಕಳಿಗೆ ತೊಂದರೆ:
ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಕುಳಿತು ಮದ್ಯ ಸೇವಿಸುತ್ತಿರುವುದರಿಂದ ಈ ಮಾರ್ಗದಲ್ಲಿ ದಿನನಿತ್ಯ ಸಂಚರಿಸುವ ಮಹಿಳೆಯರು, ಮಕ್ಕಳು ಹಾಗೂ ಸ್ಥಳೀಯರು ತೀವ್ರ ಮುಜುಗರ ಹಾಗೂ ಅಭದ್ರತೆಯಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ:
ಬಾರ್‌ಗಳ ಮುಂಭಾಗ ಹಾಗೂ ಸಾರ್ವಜನಿಕ ರಸ್ತೆಯಲ್ಲಿ ಇಷ್ಟೊಂದು ಅಸ್ತವ್ಯಸ್ತವಾಗಿ ಮದ್ಯಪಾನ ನಡೆಯುತ್ತಿದ್ದರೂ ಸಂಬಂಧಪಟ್ಟ ಅಬಕಾರಿ ಇಲಾಖೆ ಅಧಿಕಾರಿಗಳಾಗಲಿ, ಪೊಲೀಸರಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬಾರ್ ಮಾಲೀಕರ ನಿಯಮ ಉಲ್ಲಂಘನೆ ಹಾಗೂ ಅಕ್ರಮ ಬಯಲು ಮದ್ಯಪಾನದ ವಿರುದ್ಧ ಅಬಕಾರಿ ಇಲಾಖೆ ಮತ್ತು ಪೊಲೀಸರು ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
Arakshakara Times Media
Related posts
