ಕಾಸರಗೋಡು: ಬಸ್ಸಿನಿಂದ ಇಳಿಯುತ್ತಿದ್ದ ವೃದ್ಧೆಯೊಬ್ಬರ ಚಿನ್ನದ ಸರವನ್ನು ಕಳವು ಮಾಡಲು ಯತ್ನಿಸಿದ ತಮಿಳುನಾಡು ಮೂಲದ ಮಹಿಳೆಯನ್ನು ಸಾರ್ವಜನಿಕರು ರೆಡ್ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಹೊಸಂಗಡಿಯಲ್ಲಿ ನಡೆದಿದೆ.
ತಮಿಳುನಾಡಿನ ಮಧುರೈ ಮೂಲದ ಮುತ್ತಾತ್ತ (40) ಬಂಧಿತ ಆರೋಪಿ.
ಘಟನೆಯ ವಿವರ:
ಬಂಗ್ರಮಂಜೇಶ್ವರ ನಿವಾಸಿ ಪ್ರೇಮಾ (77) ಎಂಬ ವೃದ್ಧೆ ಸಂಬಂಧಿಕರ ಮದುವೆ ಮುಗಿಸಿ ಮಂಗಳೂರಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ನಲ್ಲಿ ಹೊಸಂಗಡಿಗೆ ಬರುತ್ತಿದ್ದರು. ಹೊಸಂಗಡಿ ಬಸ್ ಸ್ಟಾಪ್ನಲ್ಲಿ ಇಳಿಯುವಾಗ, ಅವರ ಹಿಂಬದಿಯಲ್ಲಿದ್ದ ಚೂಡಿದಾರ್ ಧರಿಸಿದ್ದ ಮುತ್ತಾತ್ತ ಜಾಣತನದಿಂದ 3 ಪವನ್ ಚಿನ್ನದ ಸರವನ್ನು ಕತ್ತರಿಸಲು ಯತ್ನಿಸಿದ್ದಾಳೆ.
ಇದನ್ನು ಗಮನಿಸಿದ ಮತ್ತೊಬ್ಬ ಸಹಪ್ರಯಾಣಿಕ ಯುವತಿ ತಕ್ಷಣವೇ ವೃದ್ಧೆಯನ್ನು ಎಚ್ಚರಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಸಹಪ್ರಯಾಣಿಕರು ಹಾಗೂ ಸ್ಥಳೀಯರು ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದು ಮಂಜೇಶ್ವರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಬಂಧಿತ ಮಹಿಳೆಯ ವಿರುದ್ಧ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಆಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
Arakshakara Times Media
Related posts
