ಎಚ್.ಡಿ. ಕೋಟೆ: ತಾಲೂಕಿನ ಪ್ರಸಿದ್ಧ ನಾಗರಹೊಳೆ ಅಭಯಾರಣ್ಯದ ಡಿ.ಬಿ. ಕುಪ್ಪೆ ಮತ್ತು ದಮ್ಮನಕಟ್ಟೆ ಸಫಾರಿ ವಲಯಗಳಿಗೆ ನೂತನ ವಲಯ ಅರಣ್ಯಾಧಿಕಾರಿಗಳು (ಆರ್ಎಫ್ಒ) ನಿರ್ಗಮಿತ ಅಧಿಕಾರಿಗಳಿಂದ ಅಧಿಕಾರ ಹಸ್ತಾಂತರಿಸಿಕೊಂಡು, ಅಧಿಕಾರ ಸ್ವೀಕರಿಸಿದ್ದಾರೆ.
ಡಿ.ಬಿ. ಕುಪ್ಪೆ ವಲಯದ ನೂತನ ಅರಣ್ಯಾಧಿಕಾರಿಯಾಗಿ ಸಿದ್ದರಾಜು ಹಾಗೂ ದಮ್ಮನಕಟ್ಟೆ ಸಫಾರಿ ಕೇಂದ್ರದ ವಲಯ ಅರಣ್ಯಾಧಿಕಾರಿಯಾಗಿ ಹನುಮಂತರಾಜು ಅವರು ಕಾರ್ಯಭಾರ ವಹಿಸಿಕೊಂಡಿದ್ದಾರೆ.
ದಮ್ಮನಕಟ್ಟೆಯಲ್ಲಿ ಸಿದ್ದರಾಜು ಅವರ ಯಶಸ್ವಿ ಸೇವೆ
ಕಳೆದ ಎರಡು ವರ್ಷಗಳಿಂದ ದಮ್ಮನಕಟ್ಟೆ ಅರಣ್ಯ ವಲಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ಸಿದ್ದರಾಜು ಅವರು ತಮ್ಮ ಅವಧಿಯಲ್ಲಿ ಪಕ್ಕಾ ವನ್ಯಜೀವಿ ನಿರ್ವಹಣೆಗೆ ಹೆಸರುವಾಸಿಯಾಗಿದ್ದರು. ಕಾಡುಪ್ರಾಣಿಗಳು ಜನವಸತಿ ಪ್ರದೇಶ ಹಾಗೂ ರೈತರ ಜಮೀನುಗಳತ್ತ ಬಾರದಂತೆ ತಡೆಯಲು ರೈಲ್ವೆ ಕಂಬಿಗಳಿಗೆ ಮೆಸ್ ಬಲೆಗಳನ್ನು ಅಳವಡಿಸುವ ಮೂಲಕ ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಿಸುವಲ್ಲಿ ಅತ್ಯಂತ ಯಶಸ್ವಿಯಾಗಿದ್ದರು.
ಅಲ್ಲದೆ, ಪ್ರವಾಸಿಗರ ನೆಚ್ಚಿನ ದಮ್ಮನಕಟ್ಟೆ ಸಫಾರಿ ನಿರ್ವಹಣೆಯನ್ನು ಯಾವುದೇ ಲೋಪವಿಲ್ಲದಂತೆ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಇವರ ದಕ್ಷ ಸೇವೆಯನ್ನು ಪರಿಗಣಿಸಿ ಇದೀಗ ಪ್ರಮುಖ ವಲಯವಾದ ಡಿ.ಬಿ. ಕುಪ್ಪೆಗೆ ವರ್ಗಾಯಿಸಲಾಗಿದೆ.
ಅದೇ ರೀತಿ, ಡಿ.ಬಿ. ಕುಪ್ಪೆ ಅರಣ್ಯ ವಲಯದಲ್ಲಿ ಸುದೀರ್ಘ ಕಾಲ ಉತ್ತಮ ಸೇವೆ ಸಲ್ಲಿಸಿ ಗಮನಸೆಳೆದಿದ್ದ ಹನುಮಂತರಾಜು ಅವರನ್ನು ದಮ್ಮನಕಟ್ಟೆ ಸಫಾರಿ ಕೇಂದ್ರದ ಅರಣ್ಯ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ.
ಇಬ್ಬರೂ ದಕ್ಷ ಅಧಿಕಾರಿಗಳು ತಮ್ಮ ಹೊಸ ವಲಯಗಳಲ್ಲಿ ಅಧಿಕಾರ ವಹಿಸಿಕೊಂಡಿದ್ದು, ನಾಗರಹೊಳೆ ಅಭಯಾರಣ್ಯದ ಸಂರಕ್ಷಣೆ ಮತ್ತು ನಿರ್ವಹಣೆ ಕಾರ್ಯಗಳು ಇನ್ನಷ್ಟು ಚುರುಕುಗೊಳ್ಳಲಿವೆ ಎಂದು ನಿರೀಕ್ಷಿಸಲಾಗಿದೆ.