Share News

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರು ಸಂಚಾರ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಮತ್ತು ವಿಮಾನ ನಿಲ್ದಾಣ ರಸ್ತೆಯ ಎಲಿವೇಟೆಡ್ ಫ್ಲೈಓವರ್ ಸೇರಿದಂತೆ ನಗರದ ಪ್ರಮುಖ ಮೇಲ್ಸೇತುವೆಗಳ ಮೇಲೆ ದ್ವಿಚಕ್ರ ವಾಹನ ಹಾಗೂ ಕೆಲ ನಿರ್ದಿಷ್ಟ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.

​ಯಾವ್ಯಾವ ಫ್ಲೈಓವರ್‌ಗಳಲ್ಲಿ ಏನೇನು ನಿಷೇಧ?

​ಎಲೆಕ್ಟ್ರಾನಿಕ್ ಸಿಟಿ & ಏರ್‌ಪೋರ್ಟ್ ಎಲಿವೇಟೆಡ್ ಫ್ಲೈಓವರ್: ದಿನದ 24 ಗಂಟೆಯೂ ಬೈಕ್, ಸ್ಕೂಟರ್ ಸೇರಿದಂತೆ ಎಲ್ಲಾ ಮಾದರಿಯ ದ್ವಿಚಕ್ರ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

​ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್: ದ್ವಿಚಕ್ರ ವಾಹನಗಳ ಜೊತೆಗೆ ಆಟೋ ರಿಕ್ಷಾ ಹಾಗೂ ಮೂರು ಚಕ್ರದ ಗೂಡ್ಸ್ ವಾಹನಗಳ ಸಂಚಾರಕ್ಕೂ ಸಂಪೂರ್ಣ ತಡೆ ನೀಡಲಾಗಿದೆ. ಅಲ್ಲದೆ, ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಎಲ್ಲಾ ಮಾದರಿಯ ಸರಕು ಸಾಗಣೆ (ಗೂಡ್ಸ್) ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

​ಡಬಲ್ ಡೆಕ್ಕರ್ ಫ್ಲೈಓವರ್: ಭಾರಿ ಘನ ವಾಹನಗಳ (ಹೈ ಜಿವಿ) ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

​ಮಾರ್ಕೆಟ್ ಫ್ಲೈಓವರ್ ಸೇರಿದಂತೆ ಇತರೆ ಮಾರ್ಗಗಳು: ಸುಗಮ ಸಂಚಾರಕ್ಕಾಗಿ ಕೆಲವು ನಿರ್ದಿಷ್ಟ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

​ಸುರಕ್ಷತೆಗೆ ಆದ್ಯತೆ:

ಫ್ರೈಓವರ್‌ಗಳ ಮೇಲೆ ವಾಹನಗಳ ಅತಿಯಾದ ವೇಗ ಮತ್ತು ವೇಗದ ವ್ಯತ್ಯಾಸದಿಂದಾಗಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಜೀವ ರಕ್ಷಣೆ ಹಾಗೂ ಸಂಚಾರ ಸುಗಮಗೊಳಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟ್ರಾಫಿಕ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಈ ನೂತನ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸಂಚರಿಸುವಂತೆ ಮತ್ತು ಪೊಲೀಸರೊಂದಿಗೆ ಸಹಕರಿಸುವಂತೆ ಕೋರಲಾಗಿದೆ.


Share News