Share News

ಸಾಗರ: ಜಮೀನಿಗೆ ಅಕ್ರಮವಾಗಿ ವಿದ್ಯುತ್ ತಂತಿ ತಗಲಿಸಿ ಎರಡು ಚುಕ್ಕಿ ಜಿಂಕೆಗಳನ್ನು ಬೇಟೆಯಾಡಿ, ಅವುಗಳ ಮಾಂಸವನ್ನು ಸಾಗಿಸಲು ಯತ್ನಿಸುತ್ತಿದ್ದ ಪ್ರಕರಣವನ್ನು ಶರಾವತಿ ವನ್ಯಜೀವಿ ವಲಯ (ಕೋಗಾರ್) ಅರಣ್ಯಾಧಿಕಾರಿಗಳು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೂ ಮೂವರು ತಲೆಮರೆಸಿಕೊಂಡಿದ್ದಾರೆ.

​ನಾಗವಳ್ಳಿ ಗ್ರಾಮದ ಸರ್ವೇ ನಂಬರ್ 72ರಲ್ಲಿ ಶಾಜಿ ಬಿನ್ ವರ್ಗೀಸ್ ಎಂಬುವವರು ಸಾಗುವಳಿ ಮಾಡುತ್ತಿದ್ದ ಭೂಮಿಯಲ್ಲಿ ಅಕ್ರಮವಾಗಿ ವಿದ್ಯುತ್ ತಂತಿ ಅಳವಡಿಸಿ, ವನ್ಯಜೀವಿ ಸಂರಕ್ಷಣಾ ಕಾಯ್ದೆ ಶೆಡ್ಯೂಲ್-2ರ ಅಡಿಯಲ್ಲಿ ಬರುವ ಎರಡು ಗಂಡು ಚುಕ್ಕಿ ಜಿಂಕೆಗಳನ್ನು ಸಾಯಿಸಲಾಗಿತ್ತು. ಬಳಿಕ ಜಿಂಕೆಗಳ ಮಾಂಸವನ್ನು ಬೇಯಿಸಿ ಆಹಾರ ತಯಾರಿಸಿಕೊಂಡು, ಉಳಿದ ಕಳೇಬರವನ್ನು ಜಮೀನಿನಲ್ಲೇ ಮಣ್ಣಿನಲ್ಲಿ ಹೂತುಹಾಕಲಾಗಿತ್ತು.

​ಖಚಿತ ಮಾಹಿತಿ ಮೇರೆಗೆ ಸೆಪ್ಟೆಂಬರ್ 02ರಂದು ದಾಳಿ ನಡೆಸಿದ ಅರಣ್ಯ ಸಿಬ್ಬಂದಿ, ಕೃತ್ಯ ನಡೆದ ಸ್ಥಳದಲ್ಲಿದ್ದ ಕುರುಹುಗಳನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

​ಘಟನೆಗೆ ಸಂಬಂಧಿಸಿದಂತೆ ನಾಗವಳ್ಳಿ ಗ್ರಾಮದ ಭಾನು ಬಿನ್ ಗಣು, ಶಿವ ಬಿನ್ ಗಣು ಹಾಗೂ ಮಹೇಶ ಬಿನ್ ಮಂಗಳ ಗೊಂಡ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಶಾಜಿ ಬಿನ್ ವರ್ಗೀಸ್, ರಾಮ ಬಿನ್ ಮಂಜ ಮರಾರಿ ಹಾಗೂ ಶ್ರೀಧರ ಬಿನ್ ದುರ್ಗಪ್ಪ ನಾಯ್ಕ ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

​ಈ ಯಶಸ್ವಿ ಕಾರ್ಯಾಚರಣೆಯು DCF ಪ್ರಸನ್ನ ಕೃಷ್ಣ ಪಟಗಾರ ಹಾಗೂ ACF ಗುರುರಾಜ ಸಿ. ಬಿ. ಅವರ ಮಾರ್ಗದರ್ಶನದಲ್ಲಿ, ಕೋಗಾರ್ RFO ಧನಂಜಯ ನಾಯ್ಕ ನೇತೃತ್ವದಲ್ಲಿ ನಡೆದಿದ್ದು, DRFOಗಳಾದ ಗುರುರಾಜ ತೊಳಬಂದಿ, ಕಿರಣ ಎ. ಬಿದರಳ್ಳಿ, ಸಂಧ್ಯಾ. ಎಸ್ ಹಾಗೂ ಗಸ್ತು ಅರಣ್ಯ ಪಾಲಕರಾದ ದೀಪಕ. ಎಸ್. ಪ್ರಭು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.


Share News