ರಾಮನಗರ: ಊಟ ಮಾಡುತ್ತಿದ್ದ ವೇಳೆಯಲ್ಲೇ ಏಕಾಏಕಿ ಹೃದಯಾಘಾತ ಸಂಭವಿಸಿ, ಮಗಳು ಹಾಗೂ ಅಳಿಯನ ಕಣ್ಣೆದುರಲ್ಲೇ ವ್ಯಕ್ತಿಯೊಬ್ಬರು ಕೊನೆಯುಸಿರೆಳೆದಿರುವ ಭಾವುಕ ಹಾಗೂ ಹೃದಯವಿದ್ರಾವಕ ಘಟನೆ ರಾಮನಗರ ತಾಲೂಕಿನ ಮಂಚಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶಿವಲಿಂಗಯ್ಯ ಮೃತಪಟ್ಟ ದುರದೃಷ್ಟಕರ ವ್ಯಕ್ತಿ.
ಘಟನೆಯ ವಿವರ:
ಮನೆಮಂದಿಯೊಂದಿಗೆ ಸಂತೋಷದಿಂದ ಸೋಫಾದ ಮೇಲೆ ಕುಳಿತು ಊಟ ಮಾಡುತ್ತಿದ್ದಾಗ ಶಿವಲಿಂಗಯ್ಯ ಅವರಿಗೆ ದಿಢೀರನೆ ಹೃದಯಾಘಾತ ಸಂಭವಿಸಿದೆ. ಅವರು ಕುಳಿತ ಜಾಗದಲ್ಲೇ ಏಕಾಏಕಿ ಕುಸಿದು ಬಿದ್ದಿದ್ದಾರೆ.
ಅಕ್ಕಪಕ್ಕದಲ್ಲೇ ಊಟ ಮಾಡುತ್ತಿದ್ದ ಮಗಳು ತಂದೆ ಕುಸಿದು ಬೀಳುವುದನ್ನು ಕಂಡು ಆಘಾತದಿಂದ ಚೀರಿ ಓಡಿಬಂದಿದ್ದಾರೆ. ತಕ್ಷಣವೇ ತಂದೆಯ ಎದೆ ಒತ್ತಿ ಪ್ರಥಮ ಚಿಕಿತ್ಸೆ (CPR) ನೀಡಲು ಪ್ರಯತ್ನಿಸಿದ್ದರೂ, ಅಷ್ಟರಲ್ಲಾಗಲೇ ಅವರು ಪ್ರಾಣ ಬಿಟ್ಟಿದ್ದರು.
ಸಿಸಿಟಿವಿಯಲ್ಲಿ ಸೆರೆಯಾಯ್ತು ಭಾವುಕ ದೃಶ್ಯ:
ಸೋಫಾದ ಮೇಲೆ ಕುಳಿತು ಊಟ ಮಾಡುತ್ತಿದ್ದ ಶಿವಲಿಂಗಯ್ಯ ಅವರು ಏಕಾಏಕಿ ಕುಸಿದು ಬೀಳುವ ಹಾಗೂ ಮಗಳು ತಂದೆಯನ್ನು ರಕ್ಷಿಸಲು ಹತಾಶಳಾಗಿ ಹೋರಾಡುವ ಕರುಣಾಜನಕ ದೃಶ್ಯಗಳು ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.