ಬೆಂಗಳೂರು ದಕ್ಷಿಣ ಜಿಲ್ಲೆಯ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಪಟ್ಟಣ ಸಮೀಪದ ಕಲ್ಲು ಕ್ವಾರಿಯೊಂದರಲ್ಲಿ ಘೋರ ದುರಂತ ಸಂಭವಿಸಿದೆ. ಕ್ವಾರಿ ಕುಸಿದು ಬಂಡೆ ಬಿದ್ದ ಪರಿಣಾಮವಾಗಿ ಸ್ಥಳದಲ್ಲೇ ಏಳು ಮಂದಿ ಕಾರ್ಮಿಕರು ದುರ್ಮರಣಕ್ಕೀಡಾಗಿದ್ದಾರೆ.
ಮೃತರನ್ನು ಬಿಹಾರ ಮೂಲದ ವಲಸೆ ಕಾರ್ಮಿಕರು ಎಂದು ಗುರುತಿಸಲಾಗಿದ್ದು, ಮಾದಪಟ್ಟಣದ ಬಳಿ ಇರುವ ‘ಕಾವೇರಿ ಕ್ರಷರ್’ನಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.
ಲಭ್ಯವಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಕಲ್ಲು ಕ್ವಾರಿಯಲ್ಲಿ ಕಾರ್ಮಿಕರು ಎಂದಿನಂತೆ ಕೆಳಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಕ್ವಾರಿಯ ಮೇಲ್ಭಾಗದಿಂದ ಟ್ರ್ಯಾಕ್ಟರ್ ಸಹಾಯದಿಂದ ಬೃಹತ್ ಬಂಡೆಯೊಂದನ್ನು ಜರುಗಿಸುವ (ಸರಿಸುವ) ಕೆಲಸ ನಡೆಯುತ್ತಿತ್ತು. ಆದರೆ, ದುರದೃಷ್ಟವಶಾತ್ ಈ ಪ್ರಕ್ರಿಯೆಯ ವೇಳೆ ಬಂಡೆಯು ಆಪರೇಟರ್ ನಿಯಂತ್ರಣ ತಪ್ಪಿ ನೇರವಾಗಿ ಕೆಳಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಉರುಳಿ ಬಿದ್ದಿದೆ. ಬಂಡೆಯ ಭಾರಕ್ಕೆ ಸಿಲುಕಿದ ಏಳೂ ಜನ ಕಾರ್ಮಿಕರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆ ಸಂಭವಿಸುತ್ತಿದ್ದಂತೆ ಸುತ್ತಮುತ್ತಲಿನ ಸ್ಥಳೀಯರು ಹಾಗೂ ಸಹ ಕಾರ್ಮಿಕರು ತಕ್ಷಣವೇ ರಕ್ಷಣಾ ಕಾರ್ಯಕ್ಕೆ ಧುಮುಕಿದ್ದಾರೆ. ಬಂಡೆಯ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಕಾರ್ಮಿಕರ ಮೃತದೇಹಗಳನ್ನು ಹೊರತೆಗೆಯುವಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದಾರೆ. ಸ್ಥಳದಲ್ಲಿ ಮೃತರ ಆಕ್ರಂದನ ಮುಗಿಲು ಮುಟ್ಟಿದೆ.
ದುರಂತದ ಸುದ್ದಿ ತಿಳಿಯುತ್ತಿದ್ದಂತೆ ತಾವರೆಕೆರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಾರುತಿ ಹಾಗೂ ಸಿಬ್ಬಂದಿಗಳ ತಂಡ ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ.
ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವ ಹಿನ್ನೆಲೆಯಲ್ಲಿ, ಕಾಮಗಾರಿಯ ಗುತ್ತಿಗೆ ಪಡೆದಿದ್ದ ಮೇಸ್ತ್ರಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಾವೇರಿ ಕ್ರಷರ್ ಮಾಲೀಕರು ಹಾಗೂ ಘಟನೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದು, ಅಪಘಾತದ ನಿಖರ ಕಾರಣದ ಕುರಿತು ತನಿಖೆ ಮುಂದುವರಿದಿದೆ.