ಚಿತ್ರದುರ್ಗ: ಸುಮಾರು 22 ವರ್ಷಗಳ ಹಿಂದೆ ಖಾಸಗಿ ಬಸ್ ಪ್ರಯಾಣಿಕರನ್ನು ಬೆದರಿಸಿ ದರೋಡೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಮೊಳಕಾಲ್ಮೂರು ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
ಆಂಧ್ರಪ್ರದೇಶದ ತಿರುಪತಿಯಲ್ಲಿ ತಲೆಮರೆಸಿಕೊಂಡು ವಾಸವಿದ್ದ ಭಾಸ್ಕರ್ ಅಲಿಯಾಸ್ ಯರಿಸ್ವಾಮಿ (49) ಬಂಧಿತ ಆರೋಪಿ.
ಘಟನೆಯ ಹಿನ್ನೆಲೆ:
2004ರಲ್ಲಿ ಮೊಳಕಾಲ್ಮೂರು ತಾಲೂಕಿನ ತುಮಕೂರ್ಲಹಳ್ಳಿ ಬಳಿ ಏಳು ಮಂದಿ ಸಶಸ್ತ್ರ ದರೋಡೆಕೋರರ ಗುಂಪು ಖಾಸಗಿ ಬಸ್ ಒಂದನ್ನು ತಡೆದು, ಪ್ರಯಾಣಿಕರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಭೀತಿ ಹುಟ್ಟಿಸಿತ್ತು. ಪ್ರಯಾಣಿಕರ ಬಳಿಯಿದ್ದ ಚಿನ್ನಾಭರಣ, ಬೆಲೆಬಾಳುವ ಕೈಗಡಿಯಾರಗಳು ಹಾಗೂ ವಿಸಿಪಿ (VCP) ಪ್ಲೇಯರ್ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪಿಎಸ್ಐ ಮಹೇಶ್ ಹೊಸಪೇಟೆ ನೇತೃತ್ವದಲ್ಲಿ ಕಾರ್ಯಾಚರಣೆ
ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ (SP) ಧರ್ಮೇಂದ್ರ ಕುಮಾರ್ ಮೀನಾ ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಮೊಳಕಾಲ್ಮೂರು ಪೊಲೀಸ್ ಠಾಣೆಯ ಪಿಎಸ್ಐ ಮಹೇಶ್ ಹೊಸಪೇಟೆ ನೇತೃತ್ವದ ಪೊಲೀಸ್ ಪಡೆ ನಿಖರ ಮಾಹಿತಿ ಆಧರಿಸಿ ಆಂಧ್ರಪ್ರದೇಶದ ತಿರುಪತಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿಯನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದಾಗ, ಆಂಧ್ರಪ್ರದೇಶ ರಾಜ್ಯದಲ್ಲೂ ನಡೆದ ಮತ್ತೊಂದು ದರೋಡೆ ಪ್ರಕರಣದಲ್ಲಿ ಈತ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
22 ವರ್ಷಗಳ ಹಳೆಯ ಪ್ರಕರಣದ ಆರೋಪಿಯನ್ನು ಚಾಣಾಕ್ಷತನದಿಂದ ಬಂಧಿಸಿದ ಮೊಳಕಾಲ್ಮೂರು ಪಿಎಸ್ಐ ಹಾಗೂ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಹಾಗೂ ಪೊಲೀಸ್ ಇಲಾಖೆಯಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

Arakshakara Times Media
Related posts
