ಹಾವೇರಿ: ಸಾರ್ವಜನಿಕರ ತುರ್ತು ಸೇವೆಗೆ ಬಳಕೆಯಾಗುವ 108 ಅಂಬ್ಯುಲೆನ್ಸ್‌ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
ರಾಣೇಬೆನ್ನೂರು ತಾಲ್ಲೂಕಿನ ಕುಪ್ಪೇಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ನಿಲ್ಲಿಸಲಾಗಿದ್ದ 108 ಅಂಬ್ಯುಲೆನ್ಸ್ ವಾಹನವನ್ನು ಗುರಿಯಾಗಿಸಿಕೊಂಡಿದ್ದ ಕಿಡಿಗೇಡಿಗಳು, ಅದರಲ್ಲಿದ್ದ ತುರ್ತು ಚಿಕಿತ್ಸೆಗೆ ಅಗತ್ಯವಾದ ಬೆಲೆಬಾಳುವ ಉಪಕರಣಗಳನ್ನು ಅಪಹರಿಸಿದ್ದರು. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅಪರಾಧ ಸಂಖ್ಯೆ: 31/2026) ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಸೆರೆಹಿಡಿದಿದ್ದಾರೆ. ಬಂಧಿತರನ್ನು:
ಬಸವರಾಜ ನಾಗಪ್ಪ ಹೂಲಿಹಳ್ಳಿ (35): ರಾಣೇಬೆನ್ನೂರಿನ ಸಿದ್ದೇಶ್ವರ ನಗರದ ನಿವಾಸಿ (ವೃತ್ತಿಯಲ್ಲಿ ಚಾಲಕ).
ಲಿಂಗರಾಜ ಸಿದ್ದಪ್ಪ ಮಜ್ಜಗಿ (26): ಹಾವೇರಿ ತಾಲ್ಲೂಕಿನ ಯತ್ತಿನಹಳ್ಳಿಯ ನಿವಾಸಿ (ಹಮಾಲಿ ಕೆಲಸಗಾರ) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಸುಮಾರು 1,00,000 ರೂಪಾಯಿ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ:
35,000 ರೂ. ಮೌಲ್ಯದ ಪಲ್ಸ್ ಮಾನಿಟರ್.
50,000 ರೂ. ಮೌಲ್ಯದ ವೆಂಟಿಲೇಟರ್.
15,000 ರೂ. ಮೌಲ್ಯದ ಸಿಜರಿನ್ ಪಂಪ್ ಒಳಗೊಂಡಿವೆ.
ಸಾರ್ವಜನಿಕ ಆಸ್ತಿ ಹಾಗೂ ಜೀವ ರಕ್ಷಕ ವಾಹನದ ಮೇಲೆ ನಡೆದ ಈ ಕೃತ್ಯವನ್ನು ಭೇದಿಸಿದ ಪೊಲೀಸ್ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.