Share News

ಸಂಚಾರ ನಿಯಮ ಪಾಲಿಸಿ, ಜೀವ ಉಳಿಸಿ: ಸಾರ್ವಜನಿಕರಿಗೆ ಪೊಲೀಸರ ಕರೆ

​ಚಿಕ್ಕಬಳ್ಳಾಪುರ: ರಸ್ತೆ ಅಪಘಾತಗಳನ್ನು ತಡೆಗಟ್ಟುವ ಹಾಗೂ ಸಾರ್ವಜನಿಕ ಜೀವ-ಮಾಲ ರಕ್ಷಿಸುವ ಉದ್ದೇಶದಿಂದ ಚಿಕ್ಕಬಳ್ಳಾಪುರ ನಗರ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವ್ಯಾಪಕ ಕಾರ್ಯಾಚರಣೆ ನಡೆಸಿದ್ದಾರೆ.

​ಠಾಣಾ ವ್ಯಾಪ್ತಿಯ ಪ್ರಮುಖ ರಸ್ತೆ ಹಾಗೂ ಜಂಕ್ಷನ್‌ಗಳಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಅತಿಯಾದ ವೇಗದಲ್ಲಿ (Over-speeding) ವಾಹನ ಚಲಾಯಿಸುತ್ತಿದ್ದ ಚಾಲಕರನ್ನು ತಡೆದು ನಿಲ್ಲಿಸಿದ ಪೊಲೀಸರು, ನಿಯಮಾನುಸಾರ ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ.

​ವೇಗಕ್ಕೆ ನಿಯಂತ್ರಣ – ಜಾಗೃತಿ ಅಭಿಯಾನ:

ದಂಡ ವಿಧಿಸುವುದರ ಜೊತೆಗೆ ವಾಹನ ಸವಾರರನ್ನು ತಡೆದು ರಸ್ತೆ ಸುರಕ್ಷತಾ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಯಿತು. ವೇಗದ ಮಿತಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಹಾಗೂ ಹೆದ್ದಾರಿ ಹಾಗೂ ನಗರ ರಸ್ತೆಗಳಲ್ಲಿ ಜವಾಬ್ದಾರಿಯುತವಾಗಿ ವಾಹನ ಚಲಾಯಿಸುವಂತೆ ಸಂಚಾರ ಪೊಲೀಸರು ಚಾಲಕರಿಗೆ ತಿಳಿವಳಿಕೆ ನೀಡಿದರು.

​”ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿ”

​”ಅತಿವೇಗದ ಚಾಲನೆಯಿಂದ ಚಾಲಕರಷ್ಟೇ ಅಲ್ಲದೆ, ರಸ್ತೆಯಲ್ಲಿ ಸಂಚರಿಸುವ ಇತರ ವಾಹನ ಸವಾರರು ಹಾಗೂ ಪಾದಚಾರಿಗಳ ಜೀವಕ್ಕೂ ಆಪತ್ತು ಎದುರಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ವಾಹನ ಚಾಲಕರೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು. ಸುರಕ್ಷಿತ ಪ್ರಯಾಣಕ್ಕೆ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು” ಎಂದು ಸಂಚಾರ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.

 


Share News