ಬೆಂಗಳೂರು ನಗರದ ಬಾಣಸವಾಡಿ ಪೊಲೀಸರು ಅಂತರರಾಜ್ಯ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣವನ್ನು ಭೇದಿಸಿ, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಆತನಿಂದ ಅಂದಾಜು 7.20 ಲಕ್ಷ ರೂಪಾಯಿ ಮೌಲ್ಯದ ವಿವಿಧ ಕಂಪನಿಗಳ 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಮ್ಮನಹಳ್ಳಿಯ ಖಾಸಗಿ ಕಂಪನಿಯೊಂದರ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳುವಾದ ಬಗ್ಗೆ ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ನ್ಯೂ ಬಿಇಎಲ್ ರಸ್ತೆಯಲ್ಲಿ ಆರೋಪಿಯನ್ನು ಬಂಧಿಸಿದರು. ಆರೋಪಿ ಮೂಲತಃ ಆಂಧ್ರಪ್ರದೇಶದ ಚಿತ್ತೂರಿನವನಾಗಿದ್ದು, ಬೆಂಗಳೂರಿನಲ್ಲಿ ವಾಹನಗಳನ್ನು ಕದ್ದು ಚಿತ್ತೂರಿನ ಸುತ್ತಮುತ್ತ ಮಾರಾಟ ಮಾಡುತ್ತಿದ್ದ. ಈ ಬಂಧನದಿಂದ ಬಾಣಸವಾಡಿ (2), ಕೆ.ಆರ್. ಪುರ (1), ಆರ್.ಟಿ ನಗರ (1), ಸಂಜಯನಗರ (1) ಮತ್ತು ಕಂಟೋನ್ಮೆಂಟ್ ರೈಲ್ವೇ ಸ್ಟೇಷನ್ (1) ಠಾಣೆಗಳ ಒಟ್ಟು 6 ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.
ಈ ಕಾರ್ಯಾಚರಣೆಯು ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ. ವಿಕ್ರಂ ಅಮಟೆ ಅವರ ಮಾರ್ಗದರ್ಶನದಲ್ಲಿ, ಬಾಣಸವಾಡಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಉಮಾಶಂಕರ್ ಎನ್ ಹೆಚ್ ಅವರ ನೇತೃತ್ವದಲ್ಲಿ ಮತ್ತು ಬಾಣಸವಾಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ. ಅರುಣ್ ಸಾಳುಂಕೆ ಹಾಗೂ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡದಿಂದ ಯಶಸ್ವಿಯಾಗಿ ನಡೆದಿದೆ.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್