ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನಸಂದ್ರದ ಎ.ಪಿ.ಎಂ.ಸಿ ಸಮೀಪ ಸುಮಾರು 70 ವರ್ಷದ ವೃದ್ಧ ವ್ಯಕ್ತಿಯೊಬ್ಬರು ರಸ್ತೆ ಬದಿಯಲ್ಲಿ ಮಲಗಿರುವುದಾಗಿ ಸಾರ್ವಜನಿಕರೊಬ್ಬರು ನಮ್ಮ-112 ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಮಾಹಿತಿ ಲಭಿಸಿದ ಕೇವಲ 10 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ ಚೀತಾ-282 ಸಿಬ್ಬಂದಿ ಶ್ರೀ ಸೈಪಾನ್ ಖಾತಿಕ್ ಅವರು ವೃದ್ಧರನ್ನು ವಿಚಾರಿಸಿದಾಗ, ಅವರು ಅರಸೀಕೆರೆಯವರಾಗಿದ್ದು ತಮಗೆ ಯಾರೂ ಇಲ್ಲವೆಂದು ತಿಳಿದುಬಂದಿದೆ. ನಂತರ ಅವರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಅವರನ್ನು ಸಮೀಪದ ‘ಅಮ್ಮನ ಮಡಿಲು ಆಶ್ರಮ’ಕ್ಕೆ ಸೇರಿಸಿ ಅಗತ್ಯ ಆರೈಕೆ ಒದಗಿಸಿದ್ದಾರೆ.
ಇನ್ನೊಂದೆಡೆ, ವೈಟ್‌ಫೀಲ್ಡ್ ಸರಹದ್ದಿನ ಇಮ್ಮಡಿಹಳ್ಳಿಯ ಮಹಿಳೆಯೊಬ್ಬರು ತನ್ನ ಪ್ರಿಯಕರನಿಗೆ ಕರೆ ಮಾಡಿ ಆತ ಮದುವೆಯಾಗದ ಕಾರಣ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ತಕ್ಷಣವೇ ಆತ ‘ನಮ್ಮ 112’ ಗೆ ಕರೆ ಮಾಡಿ ಮಾಹಿತಿ ನೀಡಿದಾಗ, ಚೀತಾ-310 ರಲ್ಲಿದ್ದ ಹೆಚ್ ಸಿ ಬಂಗಾರಪ್ಪ ಅವರು ಕೇವಲ 13 ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿದರು. ಕಿಟಕಿಯ ಮೂಲಕ ಮಹಿಳೆ ಆತ್ಮಹತ್ಯೆಗೆ ಯತ್ನಿಸುತ್ತಿರುವುದನ್ನು ಗಮನಿಸಿ ಅತ್ಯಂತ ತಾಳ್ಮೆಯಿಂದ ಆಕೆಯೊಂದಿಗೆ ಸಮಾಲೋಚನೆ ನಡೆಸಿ ಆಕೆಯನ್ನು ಶಾಂತಗೊಳಿಸಿ, ಜೀವ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದರಂತೆ, ದಿನಾಂಕ 31/03/2026 ರಂದು ಬೆಳಗಿನ ಜಾವ 02:49 ಗಂಟೆಗೆ ವಿದ್ಯಾರಣ್ಯಪುರದಲ್ಲಿನ ಸಂಭ್ರಮ್ ಕಾಲೇಜು ಬಳಿ ಯುವತಿಯೊಬ್ಬರು ಮದ್ಯಪಾನ ಮಾಡಿ ಒಬ್ಬರೇ ರಸ್ತೆಯಲ್ಲಿ ಹೋಗುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ‘ನಮ್ಮ 112’ ಗೆ ಮಾಹಿತಿ ನೀಡಿದರು. ಹೊಯ್ಸಳ-169 ರಲ್ಲಿದ್ದ ಎ ಎಸ್ ಐ ಸಿದ್ದಲಿಂಗಮೂರ್ತಿ ಮತ್ತು ಹೆಚ್ ಸಿ ಸೋಮಣ್ಣ ಅವರು ಕೇವಲ 3 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದರು. ವಿಚಾರಣೆ ನಡೆಸಿದಾಗ ಯುವತಿಯು ಅಜ್ಜ-ಅಜ್ಜಿಯೊಂದಿಗೆ ಜಗಳವಾಡಿ ಮನೆ ಬಿಟ್ಟು ಬಂದಿರುವುದು ತಿಳಿದುಬಂದಿದೆ. ತಕ್ಷಣವೇ ಪೊಲೀಸರು ಆಕೆಯ ಅಜ್ಜ-ಅಜ್ಜಿಯನ್ನು ಸಂಪರ್ಕಿಸಿ, ಯುವತಿಗೆ ತಿಳುವಳಿಕೆ ನೀಡಿ ಸುರಕ್ಷಿತವಾಗಿ ಅವರ ವಶಕ್ಕೆ ಒಪ್ಪಿಸಿದ್ದಾರೆ.

ಈ ಘಟನೆಗಳು ಬೆಂಗಳೂರು ಪೊಲೀಸರ ಮಾನವೀಯ ಮತ್ತು ಕೌಶಲ್ಯಪೂರ್ಣ ಕಾರ್ಯವೈಖರಿಯನ್ನು ಪ್ರತಿಬಿಂಬಿಸುವುದಲ್ಲದೆ, ಸಂಕಷ್ಟದಲ್ಲಿರುವ ನಾಗರಿಕರ ರಕ್ಷಣೆಯಲ್ಲಿ ಬದ್ಧತೆ ಮತ್ತು ಸೇಫ್ ಸಿಟಿ ಯೋಜನೆಯ ಪರಿಣಾಮಕಾರಿತ್ವವನ್ನು ಎತ್ತಿ ತೋರಿಸುತ್ತದೆ.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್