Share News

ಕಲಬುರಗಿ: ನಗರದಲ್ಲಿ ಆಟೋ ರಿಕ್ಷಾಗಳ ಸಂಚಾರ ಸುಗಮಗೊಳಿಸುವ ಹಾಗೂ ಪ್ರಯಾಣಿಕರ ಸುರಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದಲ್ಲಿ ಆಟೋ ಚಾಲಕರೊಂದಿಗೆ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್.ಡಿ. (IPS) ಅವರು ಹಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.

​ನಗರದಲ್ಲಿ ಪರವಾನಿಗೆ (Permit) ಇಲ್ಲದೆ ಅಕ್ರಮವಾಗಿ ಆಟೋ ಚಲಾಯಿಸುವವರ ವಿರುದ್ಧ ಮುಂಬರುವ ದಿನಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ಎಚ್ಚರಿಸಿದರು.

​ಆಟೋ ಚಾಲಕರಿಗೆ ನೀಡಿರುವ ಪ್ರಮುಖ ಸೂಚನೆಗಳು:

​ಕಡ್ಡಾಯ ದಾಖಲೆ ಮತ್ತು ಪರವಾನಿಗೆ: ಪ್ರತಿಯೊಬ್ಬ ಆಟೋ ಚಾಲಕರು ಕಡ್ಡಾಯವಾಗಿ ಮಾನ್ಯ ಪರವಾನಿಗೆಯನ್ನು ಹೊಂದಿರಬೇಕು ಹಾಗೂ ವಾಹನಕ್ಕೆ ಸಂಬಂಧಿಸಿದ ಚಾಲ್ತಿಯಲ್ಲಿರುವ ಎಲ್ಲಾ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡು ಆಟೋ ಚಲಾಯಿಸಬೇಕು.

​ಶಾಲಾ ಮಕ್ಕಳ ಸುರಕ್ಷತೆ ಹಾಗೂ ಮಿತಿ: ಆಟೋಗಳಲ್ಲಿ ನಿಗದಿತ ಆಸನ ಸಂಖ್ಯೆಗಿಂತ ಹೆಚ್ಚಿನ ಶಾಲಾ ಮಕ್ಕಳನ್ನು ಕೂರಿಸಿಕೊಂಡು ಕರೆದೊಯ್ಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಮಕ್ಕಳ ಸುರಕ್ಷತೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸಬಾರದು.

​ಸಂಚಾರ ನಿಯಮಗಳ ಪಾಲನೆ: ನಗರದಲ್ಲಿ ರಸ್ತೆ ಸಂಚಾರ ಸುಗಮವಾಗಿರಲು ಪ್ರತಿಯೊಬ್ಬ ಚಾಲಕನೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಪ್ರಯಾಣಿಕರ ಭದ್ರತೆಗೆ ಮೊದಲ ಆದ್ಯತೆ ನೀಡಬೇಕು.

​ಸಭೆಯಲ್ಲಿ ನಗರ ಪೊಲೀಸ್ ಆಯುಕ್ತರು ಆಟೋ ಚಾಲಕರಿಗೆ ನಿಯಮಾವಳಿಗಳು, ವಾಹನ ದಾಖಲಾತಿ ಹಾಗೂ ಸಂಚಾರ ಭದ್ರತೆ ಕುರಿತು ಸಮಗ್ರ ಮಾರ್ಗದರ್ಶನ ನೀಡಿದರು.


Share News