Share News

ಚಿಕ್ಕಮಗಳೂರು: ಕೃಷಿ ಜಮೀನಿನ ಸರ್ವೆ ನಡೆಸಿ ಸ್ಕೆಚ್ ತಯಾರಿಸಿಕೊಡಲು ಲಕ್ಷಾಂತರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಇಬ್ಬರು ಸರ್ವೆ ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

​ಚಿಕ್ಕಮಗಳೂರು ತಾಲೂಕಿನ ಸರ್ವೇಯರ್‌ಗಳಾದ ದೊರೆರಾಜ್ ಹಾಗೂ ರಂಗನಾಥ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದಾರೆ.

​ಘಟನೆಯ ವಿವರ:

ಚಿಕ್ಕಮಗಳೂರು ನಗರದ ಹೊರವಲಯದ ಇಂದಾವರ ಗ್ರಾಮದ ನಿವಾಸಿ ಧರಣೇಶ್ ಎಂಬುವರು ತಮ್ಮ ಕೃಷಿ ಜಮೀನಿನ ಸರ್ವೆ ಮಾಡಿ ಸ್ಕೆಚ್ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಜಮೀನಿನ ಕೆಲಸ ಮಾಡಿಕೊಡಲು ಸರ್ವೇಯರ್‌ಗಳಾದ ದೊರೆರಾಜ್ ಮತ್ತು ರಂಗನಾಥ್ ಒಟ್ಟು ₹10 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.

​ಲಂಚ ನೀಡಲು ಇಷ್ಟವಿಲ್ಲದ ಧರಣೇಶ್ ಅವರು ಈ ಕುರಿತು ಚಿಕ್ಕಮಗಳೂರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು.

​ಖಾಸಗಿ ಕಚೇರಿಯಲ್ಲಿ ರೆಡ್ ಹ್ಯಾಂಡ್ ಕಾರ್ಯಾಚರಣೆ:

ದೂರಿನ ಅನ್ವಯ ಪ್ಲಾನ್ ರೂಪಿಸಿದ ಲೋಕಾಯುಕ್ತ ಪೊಲೀಸರು, ಮಂಗಳವಾರ ಧರಣೇಶ್ ಅವರಿಂದ ಮುಂಗಡವಾಗಿ ₹2 ಲಕ್ಷ ಲಂಚದ ಹಣವನ್ನು ಪಡೆಯುತ್ತಿದ್ದಾಗ ಇಬ್ಬರೂ ಅಧಿಕಾರಿಗಳನ್ನು ಅವರ ಖಾಸಗಿ ಕಚೇರಿಯಲ್ಲಿಯೇ ರೆಡ್ ಹ್ಯಾಂಡ್‌ ಆಗಿ ವಶಕ್ಕೆ ಪಡೆದಿದ್ದಾರೆ.

​ಚಿಕ್ಕಮಗಳೂರು ಲೋಕಾಯುಕ್ತ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (DYSP) ತಿರುಮಲೇಶ್ ಅವರ ನೇತೃತ್ವದ ತಂಡ ಈ ದಾಳಿ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


Share News