ಬೆಂಗಳೂರು: ಕಾಲೇಜು ದಿನಗಳ ಸಹಪಾಠಿಯೊಬ್ಬ ನೀಡುತ್ತಿದ್ದ ಮಾನಸಿಕ ಕಿರುಕುಳ ಹಾಗೂ ಬ್ಲ್ಯಾಕ್ಮೇಲ್ಗೆ ಬೇಸತ್ತು 22 ವರ್ಷದ ಯುವತಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ನಗರದ ಎಚ್ಎಸ್ಆರ್ ಲೇಔಟ್ನಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೆಳಮಕ್ಕಿ ಮೂಲದ ವಾಣಿ (22) ಆತ್ಮಹತ್ಯೆಗೆ ಶರಣಾದ ಯುವತಿ. ಸುಮಾರು ಒಂದು ವರ್ಷದ ಹಿಂದೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಈಕೆ, ನಗರದ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಡೆತ್ ನೋಟ್ನಲ್ಲಿ ಗಂಭೀರ ಆರೋಪ:
ಎಚ್ಎಸ್ಆರ್ ಲೇಔಟ್ನಲ್ಲಿರುವ ಅಗ್ರ ಕೆರೆಗೆ ಹಾರಿ ವಾಣಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕೃತ್ಯಕ್ಕೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ.
ಬ್ಲ್ಯಾಕ್ಮೇಲ್ ಹಾಗೂ ಕಿರುಕುಳ: ಕಾಲೇಜಿನಲ್ಲಿ ಜೊತೆಯಲ್ಲಿ ಓದುತ್ತಿದ್ದ ಅಭಿಷೇಕ್ ಎಂಬಾತ ವಾಟ್ಸ್ಆಪ್ ಮೂಲಕ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ.
ಕೋಣೆಗೆ ಬರಲು ಒತ್ತಡ: “ತಾನು ಕರೆದಾಗಲೆಲ್ಲಾ ರೂಮ್ಗೆ ಬರಬೇಕು” ಎಂದು ಮೆಸೇಜ್ಗಳನ್ನು ಕಳುಹಿಸಿ ತೀವ್ರ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ವಾಣಿ ಡೆತ್ ನೋಟ್ನಲ್ಲಿ ಉಲ್ಲೇಖಿಸಿದ್ದಾರೆ.
ಶಿಕ್ಷೆಗೆ ಆಗ್ರಹ: ತನ್ನ ಸಾವಿಗೆ ಕಾರಣನಾದ ಅಭಿಷೇಕ್ನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಯುವತಿ ಡೆತ್ ನೋಟ್ನಲ್ಲಿ ಮನವಿ ಮಾಡಿದ್ದಾರೆ.
ಪೊಲೀಸ್ ತನಿಖೆ:
ಘಟನೆಗೆ ಸಂಬಂಧಿಸಿದಂತೆ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಅಭಿಷೇಕ್ಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
Arakshakara Times Media
Related posts
