Share News

ಬೆಂಗಳೂರು : ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿ ಸೇರಿದಂತೆ ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ ನೀಡಲು ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಕರ್ನಾಟಕವನ್ನು ದೇಶದ ಪ್ರಮುಖ ಕ್ರೀಡಾ ರಾಜ್ಯವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

​ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆಯು ಕಂಠೀರವ ಕ್ರೀಡಾಂಗಣದ ಒಲಂಪಿಕ್ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಚಾಂಪಿಯನ್‌ಶಿಪ್ ವಿಜೇತ ಕಿರಿಯ ಹಾಗೂ ಯುವಕರ ಬಾಸ್ಕೆಟ್‌ಬಾಲ್ ತಂಡಗಳ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

​ಪ್ರಮುಖ ಮುಖ್ಯಾಂಶಗಳು ಹಾಗೂ ಯೋಜನೆಗಳು:

​ಉದ್ಯೋಗ ಮೀಸಲಾತಿ: ಸರ್ಕಾರ ಭರ್ತಿ ಮಾಡಲು ಉದ್ದೇಶಿಸಿರುವ 72,000 ಖಾಲಿ ಹುದ್ದೆಗಳಲ್ಲಿ ಕ್ರೀಡಾಪಟುಗಳಿಗೆ ಶೇ.2 ರಷ್ಟು ಮೀಸಲಾತಿ ಸಿಗಲಿದೆ. ಈಗಾಗಲೇ ಪೊಲೀಸ್ ಇಲಾಖೆಯ ಪಿಎಸ್‌ಐ ಹಾಗೂ ಕಾನ್‌ಸ್ಟೇಬಲ್ ನೇಮಕಾತಿಯಲ್ಲಿ ಮೀಸಲಾತಿಯನ್ನು ಶೇ.3ಕ್ಕೆ ಹೆಚ್ಚಿಸಲಾಗಿದೆ.

​ಆರ್ಥಿಕ ಪ್ರೋತ್ಸಾಹ: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ತಲಾ ₹5 ಲಕ್ಷ ಹಾಗೂ ಪದಕ ವಿಜೇತರಿಗೆ ₹15 ಲಕ್ಷ ಪ್ರೋತ್ಸಾಹ ಧನ ನೀಡಲು ಕ್ರಮ ಕೈಗೊಳ್ಳಲಾಗುವುದು.

​ದೇವನಹಳ್ಳಿಯಲ್ಲಿ ಸ್ಪೋರ್ಟ್ಸ್ ಸಿಟಿ: ದೇವನಹಳ್ಳಿ ಸಮೀಪ ಸುಮಾರು 60 ಎಕರೆ ಪ್ರದೇಶದಲ್ಲಿ ಆಧುನಿಕ ಸೌಲಭ್ಯಗಳುಳ್ಳ ‘ಸ್ಪೋರ್ಟ್ಸ್ ಸಿಟಿ’ ನಿರ್ಮಾಣಕ್ಕೆ ಯೋಜನೆ ಹಾಗೂ ನೀಲನಕ್ಷೆ ಸಿದ್ಧಪಡಿಸಲಾಗಿದೆ.

​ಕಂಠೀರವ ಕ್ರೀಡಾಂಗಣ ಮೇಲ್ದರ್ಜೆಗೆ: ಬೆಂಗಳೂರಿನ ಕಂಠೀರವ ಕ್ರೀಡಾಂಗಣವನ್ನು ಸುಮಾರು ₹5,000 ಕೋಟಿ ವೆಚ್ಚದಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣವನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ.

​ಬ್ಯಾಸ್ಕೆಟ್‌ಬಾಲ್ ಕ್ರೀಡಾಂಗಣ: ಬ್ಯಾಸ್ಕೆಟ್‌ಬಾಲ್ ಕ್ರೀಡೆಯ ಅಭಿವೃದ್ಧಿಗೆ ಸರ್ಕಾರದಿಂದ 5 ಎಕರೆ ಜಾಗ ನೀಡಲಾಗಿದ್ದು, ಆಧುನಿಕ ಮೂಲಸೌಕರ್ಯ ಕಲ್ಪಿಸಲಾಗುವುದು.

​ಕಾರ್ಯಕ್ರಮದಲ್ಲಿ ಕರ್ನಾಟಕ ಒಲಂಪಿಕ್ ಸಂಸ್ಥೆಯ ಅಧ್ಯಕ್ಷ ಡಾ. ಕೆ. ಗೋವಿಂದರಾಜು, ಕ್ರೀಡಾ ಇಲಾಖೆ ಆಯುಕ್ತ ಎಂ.ಎನ್. ಅನುಚೇತ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


Share News