ಗದಗ: ಗದಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಕಳ್ಳತನ, ವಂಚನೆ ಹಾಗೂ ಮೊಬೈಲ್ ನಾಪತ್ತೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒಟ್ಟು ₹3.685 ಕೋಟಿ ಮೌಲ್ಯದ ಕಳವು ಸ್ವತ್ತನ್ನು ವಶಪಡಿಸಿಕೊಂಡು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
ಆಗಸ್ಟ್ 17, 2026 ರಂದು ಜಿಲ್ಲಾ ಪೊಲೀಸ್ ಸಭಾ ಭವನದಲ್ಲಿ ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕರು (IGP) ಶ್ರೀ ಸಂದೀಪ್ ಪಾಟೀಲ್, IPS ಅವರ ಉಪಸ್ಥಿತಿಯಲ್ಲಿ ಅದ್ಧೂರಿ ‘ಪ್ರಾಪರ್ಟಿ ಪರೇಡ್’ (Property Parade) ಜರುಗಿತು. ಈ ವೇಳೆ ಪತ್ತೆಯಾದ ಬಂಗಾರ, ಬೆಳ್ಳಿ, ನಗದು, ವಾಹನಗಳು ಹಾಗೂ ಮೊಬೈಲ್ಗಳನ್ನು ಮೂಲ ಫಿರ್ಯಾದಿದಾರರಿಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು.
ಪತ್ತೆಯಾದ ಸ್ವತ್ತುಗಳು ಹಾಗೂ ಪ್ರಕರಣಗಳ ವಿವರ:
* ಕಳ್ಳತನ & ಸ್ವತ್ತಿನ ಅಪರಾಧ ಪ್ರಕರಣಗಳು: 01.08.2025 ರಿಂದ 31.07.2026 ರ ಅವಧಿಯಲ್ಲಿ ದಾಖಲಾದ 74 ಪ್ರಕರಣಗಳಲ್ಲಿ 111 ಆರೋಪಿಗಳನ್ನು ಬಂಧಿಸಲಾಗಿದೆ. ಇವರಿಂದ ₹1.65 ಕೋಟಿ ಮೌಲ್ಯದ 1.73 ಕೆಜಿ ಚಿನ್ನ, ₹60.50 ಲಕ್ಷ ಮೌಲ್ಯದ 37 ಕೆಜಿ ಬೆಳ್ಳಿ, ₹7.98 ಲಕ್ಷ ನಗದು ಹಾಗೂ ₹17.13 ಲಕ್ಷ ಮೌಲ್ಯದ 40 ವಾಹನಗಳನ್ನು ಜಪ್ತಿ ಮಾಡಲಾಗಿದೆ.
* ಮೋಸ/ವಂಚನೆ ಪ್ರಕರಣಗಳು: 27 ಪ್ರಕರಣಗಳಲ್ಲಿ 35 ಆರೋಪಿಗಳನ್ನು ಬಂಧಿಸಿ, ಒಟ್ಟು ₹37.14 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.
* CEIR ಪೋರ್ಟಲ್ ಮೂಲಕ ಮೊಬೈಲ್ ಪತ್ತೆ: ಕಳೆದುಹೋದ/ಕಳ್ಳತನವಾದ ಮೊಬೈಲ್ಗಳಿಗೆ ಸಂಬಂಧಿಸಿದಂತೆ CEIR ಪೋರ್ಟಲ್ ಉಲ್ಲೇಖಿಸಿ ದಾಖಲಾದ 1,440 ಪ್ರಕರಣ ಪೈಕಿ ₹97.19 ಲಕ್ಷ ಮೌಲ್ಯದ 965 ಮೊಬೈಲ್ಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಲಾಗಿದೆ.
ಒಟ್ಟಾರೆ ಸಾಧನೆ:
ಒಟ್ಟು 1,576 ಪ್ರಕರಣಗಳಿಗೆ ಸಂಬಂಧಿಸಿದಂತೆ 146 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು, ₹3.685 ಕೋಟಿ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆಯಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕರ (SP) ಸಮರ್ಥ ನೇತೃತ್ವದಲ್ಲಿ ರಾತ್ರಿ-ಹಗಲೆನ್ನದೆ ಶ್ರಮಿಸಿ ಈ ಪ್ರಕರಣಗಳನ್ನು ಭೇದಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವೈಖರಿಯನ್ನು ಐಜಿಪಿ ಶ್ರೀ ಸಂದೀಪ್ ಪಾಟೀಲ್ ಅವರು ಮುಕ್ತಕಂಠದಿಂದ ಶ್ಲಾಘಿಸಿ, ಅಭಿನಂದನೆ ಸಲ್ಲಿಸಿದರು.