ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯ ಕೈಗಾರಿಕಾ ಪ್ರದೇಶವಾದ ಉದ್ಯಮಬಾಗದಲ್ಲಿ ಭಾರಿ ಆತಂಕ ಮೂಡಿಸುವಂತಹ ಸ್ಪೋಟಕ ಸತ್ಯವೊಂದು ಬೆಳಕಿಗೆ ಬಂದಿದೆ. ಮಹಾನಗರ ಪಾಲಿಕೆಯ ಪೌರಕಾರ್ಮಿಕರು ಕಸ ವಿಲೇವಾರಿ ಮಾಡುತ್ತಿದ್ದ ವೇಳೆ ಬರೋಬ್ಬರಿ 59 ಜೀವಂತ ತೋಟಾಗಳು (ಬ್ಯುಲೆಟ್ಸ್) ಪತ್ತೆಯಾಗಿದ್ದು, ಇಡೀ ನಗರದಲ್ಲೇ ಸಂಚಲನ ಸೃಷ್ಟಿಸಿದೆ.
ಮಹಾನಗರ ಪಾಲಿಕೆಯ ಪೌರಕಾರ್ಮಿಕರು ಎಂದಿನಂತೆ ಉದ್ಯಮಬಾಗದ ರಸ್ತೆ ಬದಿಯಲ್ಲಿ ಶೇಖರಣೆಯಾಗಿದ್ದ ಕಸದ ರಾಶಿಯನ್ನು ಕ್ಲೀನ್ ಮಾಡಿ, ವಿಂಗಡಿಸುತ್ತಿದ್ದರು. ಈ ವೇಳೆ ಪ್ಲಾಸ್ಟಿಕ್ ಹಾಗೂ ಕಸದ ನಡುವೆ ಗುಂಡುಗಳು ಇರುವುದು ಕಂಡುಬಂದಿದೆ. ಅಪಾಯವನ್ನು ತಕ್ಷಣವೇ ಗ್ರಹಿಸಿದ ಜಾಣ ಪೌರಕಾರ್ಮಿಕರು, ವಿಳಂಬ ಮಾಡದೆ ತಕ್ಷಣವೇ ಸ್ಥಳೀಯ ಉದ್ಯಮಬಾಗ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಉದ್ಯಮಬಾಗ ಪೊಲೀಸ್ ನಿರೀಕ್ಷಕರಾದ (ಇನ್ಸ್‌ಪೆಕ್ಟರ್) ಮಹಾಂತೇಶ ಹೊಸಪೇಟೆ ಹಾಗೂ ಅವರ ತಂಡ ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದೆ. ಸಂಪೂರ್ಣ ಕಸದ ರಾಶಿಯನ್ನು ತಮ್ಮ ವಶಕ್ಕೆ ಪಡೆದ ಪೊಲೀಸರು ಪರಿಶೀಲನೆ ನಡೆಸಿದಾಗ ಒಟ್ಟು 59 ಜೀವಂತ ಗುಂಡುಗಳು ಸಿಕ್ಕಿವೆ.
ವಶಪಡಿಸಿಕೊಳ್ಳಲಾದ ಒಟ್ಟು 59 ಗುಂಡುಗಳ ಪೈಕಿ, 41 ಗುಂಡುಗಳು ಒಂದು ಮಾದರಿಯದ್ದಾಗಿದ್ದರೆ, ಇನ್ನುಳಿದ 18 ಗುಂಡುಗಳು ಮತ್ತೊಂದು ಪ್ರತ್ಯೇಕ ಮಾದರಿಯದ್ದಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇವುಗಳು ಯಾವ ಮಾದರಿಯ ಬಂದೂಕಿಗೆ ಬಳಸುವಂತಹವು ಎಂಬ ಬಗ್ಗೆ ತಜ್ಞರಿಂದ ಪರಿಶೀಲನೆ ನಡೆಸಲಾಗುತ್ತಿದೆ.
ಸದ್ಯ ಘಟನಾ ಸ್ಥಳಕ್ಕೆ ಪಿಎಸ್‌ಐ ಪ್ರವೀಣ ಬಿರಾದಾರ್ ನೇತೃತ್ವದ ತಂಡ ಭೇಟಿ ನೀಡಿ ಸಾರ್ವಜನಿಕರ ಸಮ್ಮುಖದಲ್ಲಿ ಮಹಜರು ಪ್ರಕ್ರಿಯೆ ನಡೆಸಿ, ಗುಂಡುಗಳನ್ನು ಸುರಕ್ಷಿತವಾಗಿ ಜಪ್ತಿ ಮಾಡಿದೆ.
ಇಷ್ಟು ದೊಡ್ಡ ಪ್ರಮಾಣದ ಆರ್ಮಿ ಅಥವಾ ಪೊಲೀಸ್ ಮಾದರಿಯ ಜೀವಂತ ಗುಂಡುಗಳು ಕಸದ ತೊಟ್ಟಿಗೆ ಹೇಗೆ ಬಂದವು? ಇವುಗಳನ್ನು ಇಲ್ಲಿ ತಂದು ಬಿಸಾಡಿದ ಅಪರಿಚಿತರು ಯಾರು? ಪರವಾನಗಿ ಹೊಂದಿದ ಶಸ್ತ್ರಾಸ್ತ್ರ ಬಳಕೆದಾರರು ಇದನ್ನು ಎಸೆದಿದ್ದಾರೆಯೇ ಅಥವಾ ಅಕ್ರಮ ಶಸ್ತ್ರಾಸ್ತ್ರ ದಂಧೆಯ ಜಾಲ ಇದರ ಹಿಂದೆ ಇದೆಯೇ? ಎಂಬ ಹಲವು ಆಯಾಮಗಳಲ್ಲಿ ಉದ್ಯಮಬಾಗ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತೀವ್ರ ತನಿಖೆ ಕೈಗೊಂಡಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದಾಗಿ ಸದ್ಯ ಕೈಗಾರಿಕಾ ವಲಯದ ಸಾರ್ವಜನಿಕರಲ್ಲಿ ಕಳವಳ ಹೆಚ್ಚಾಗಿದೆ.