ದಾವಣಗೆರೆ: ಜಿಲ್ಲೆಯಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಸಮರ ಸಾರಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ (ಅಕ್ರಮ ಆಸ್ತಿ ಗಳಿಕೆ) ಆರೋಪದ ಹಿನ್ನೆಲೆಯಲ್ಲಿ ದಾವಣಗೆರೆಯ ಪ್ರಮುಖ ಮೂವರು ಉನ್ನತ ಮಟ್ಟದ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ಮುಂಜಾನೆಯೇ ಏಕಕಾಲದಲ್ಲಿ ಭರ್ಜರಿ ದಾಳಿ ನಡೆಸಿದ್ದಾರೆ.
ಬಯಲು ಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಕೃಷ್ಣಾ ನಾಯ್ಕ್, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮುಖ್ಯ ಯಾಂತ್ರಿಕ ಇಂಜಿನಿಯರ್ ಸಿದ್ದೇಶ್ವರ ಹೆಬ್ಬಾಳ್ ಹಾಗೂ ಕೆಆರ್‌ಐಡಿಎಲ್ (KRIDL) ಅಧೀಕ್ಷಕ ಇಂಜಿನಿಯರ್ ಸಣ್ಣ ಕೆಂಚಪ್ಪ ದಾಳಿಗೆ ಒಳಗಾದ ಭ್ರಷ್ಟಾಚಾರದ ಶಂಕೆ ಎದುರಿಸುತ್ತಿರುವ ಅಧಿಕಾರಿಗಳಾಗಿದ್ದಾರೆ.
ದಾವಣಗೆರೆ ಮಾತ್ರವಲ್ಲದೆ ಬೆಳಗಾವಿ, ಹುಬ್ಬಳ್ಳಿ ಹಾಗೂ ವಿಜಯನಗರ ಸೇರಿದಂತೆ ವಿವಿಧ ಜಿಲ್ಲೆಗಳ ಒಟ್ಟು 12 ಲೋಕಾಯುಕ್ತ ಅಧಿಕಾರಿಗಳ ತಂಡಗಳು ಈ ಬೃಹತ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪುರ ಅವರ ನೇತೃತ್ವದಲ್ಲಿ ಅಧಿಕಾರಿಗಳು ಸರಣಿ ದಾಳಿ ನಡೆಸಿ ದಾಖಲೆಗಳನ್ನು ಜಾಲಾಡುತ್ತಿದ್ದಾರೆ.
ಕೃಷ್ಣಾ ನಾಯ್ಕ್ (ಕಾರ್ಯದರ್ಶಿ): ದಾವಣಗೆರೆಯ ಪ್ರತಿಷ್ಠಿತ ಸಿದ್ದವೀರಪ್ಪ ಬಡಾವಣೆಯಲ್ಲಿರುವ ಇವರಿಗೆ ಸೇರಿದ ಎರಡು ಐಷಾರಾಮಿ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸುತ್ತಿದ್ದಾರೆ.
ಸಿದ್ದೇಶ್ವರ ಹೆಬ್ಬಾಳ್ (ಮುಖ್ಯ ಇಂಜಿನಿಯರ್): ಇವರಿಗೆ ಸಂಬಂಧಿಸಿದ ದಾವಣಗೆರೆಯ ಸರಸ್ವತಿ ನಗರ ಹಾಗೂ ಆಂಜನೇಯ ಬಡಾವಣೆಯ ನಿವಾಸಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ದಂಡು ಮೊಕ್ಕಾಂ ಹೂಡಿದೆ.
ಸಣ್ಣ ಕೆಂಚಪ್ಪ (ಅಧೀಕ್ಷಕ ಇಂಜಿನಿಯರ್): ದಾವಣಗೆರೆಯ ಶಿವಕುಮಾರ್ ಬಡಾವಣೆಯ ನಿವಾಸ ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿರುವ ಇವರ ಮತ್ತೊಂದು ನಿವಾಸದ ಮೇಲೂ ಏಕಕಾಲದಲ್ಲಿ ದಾಳಿ ನಡೆದಿದೆ.
ಪ್ರಾಥಮಿಕ ತನಿಖಾ ಮೂಲಗಳ ಪ್ರಕಾರ, NWKRTC ಮುಖ್ಯ ಯಾಂತ್ರಿಕ ಇಂಜಿನಿಯರ್ ಸಿದ್ದೇಶ್ವರ ಹೆಬ್ಬಾಳ್ ಅವರ ನಿವಾಸದಲ್ಲಿ ಕಂತೆ ಕಂತೆ ಲಕ್ಷಾಂತರ ರೂಪಾಯಿ ನಗದು ಹಣ, ಭಾರಿ ಪ್ರಮಾಣದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಅಧಿಕಾರಿಗಳು ಪತ್ತೆಯಾದ ಆಭರಣಗಳು ಹಾಗೂ ನಗದಿನ ಮೌಲ್ಯಮಾಪನ ಮಾಡುತ್ತಿದ್ದಾರೆ.
ಇದರೊಂದಿಗೆ ಅಧಿಕಾರಿಗಳ ಹೆಸರಿನಲ್ಲಿ ಹಾಗೂ ಅವರ ಕುಟುಂಬಸ್ಥರ ಹೆಸರಿನಲ್ಲಿರುವ ಸೈಟುಗಳು, ಕೃಷಿ ಭೂಮಿ, ವಾಣಿಜ್ಯ ಸಂಕೀರ್ಣಗಳ ಆಸ್ತಿ ಪತ್ರಗಳು, ಬ್ಯಾಂಕ್ ಲಾಕರ್‌ಗಳು ಹಾಗೂ ಹೂಡಿಕೆಯ ಪ್ರಮುಖ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ಜಪ್ತಿ ಮಾಡಿದ್ದಾರೆ. ಸದ್ಯ ಆಸ್ತಿ ವಿವರಗಳ ಮೌಲ್ಯಮಾಪನ ಕಾರ್ಯ ಪ್ರಗತಿಯಲ್ಲಿದ್ದು, ಪರಿಶೀಲನೆಯ ನಂತರ ಭ್ರಷ್ಟ ಅಧಿಕಾರಿಗಳ ಅಕ್ರಮ ಆಸ್ತಿಯ ಸಂಪೂರ್ಣ ವಿವರ ಹೊರಬೀಳಬೇಕಿದೆ.