Share News

ಸಿರಿಗುಪ್ಪ / ಬಳ್ಳಾರಿ: ಬಡ ಜನರಿಗೆ ವಿತರಿಸಬೇಕಿದ್ದ ಸರ್ಕಾರದ ಉಚಿತ ಪಡಿತರ ಅಕ್ಕಿಯನ್ನು ನೇರವಾಗಿ ಪಡಿತರ ಅಂಗಡಿಗಳಿಂದಲೇ ಕಾಳಸಂತೆಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಬಳ್ಳಾರಿ ಜಿಲ್ಲೆಯ ಸಿರಿಗುಪ್ಪ ತಾಲೂಕು ಪೊಲೀಸರು ಭೇದಿಸಿದ್ದಾರೆ. ಖಚಿತ ಮಾಹಿತಿ ಆಧರಿಸಿ ಕಾರ್ಯಪ್ರವೃತ್ತರಾದ ಪೊಲೀಸರು, ಬರೋಬ್ಬರಿ 11.20 ಲಕ್ಷ ರೂಪಾಯಿ ಮೌಲ್ಯದ 334 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

​ಸ್ಕಿಚ್ ಹಾಕಿ ಗಡಿಭಾಗದಲ್ಲಿ ವಾಹನ ಬದಲಾಯಿಸುತ್ತಿದ್ದ ಕಿರಾತಕರು:

​ಆರೋಪಿಗಳು ಬಳ್ಳಾರಿ ಜಿಲ್ಲೆಯ ವಿವಿಧ ಪಡಿತರ ಅಂಗಡಿಗಳಿಂದ ಅಕ್ಕಿಯನ್ನು ಸಂಗ್ರಹಿಸಿ, ಸಿರಿಗುಪ್ಪ ಮಾರ್ಗವಾಗಿ ರಾಯಚೂರು ಕಡೆಗೆ ಸಾಗಿಸುತ್ತಿದ್ದರು. ಪೊಲೀಸರ ಕಣ್ಣಿಗೆ ಮಣ್ಣೆರಚಲು ಸಿರಿಗುಪ್ಪ ಹಾಗೂ ಸಿಂಧನೂರು ಗಡಿ ಭಾಗದಲ್ಲಿ ವಾಹನಗಳನ್ನು ಬದಲಾಯಿಸಿ ಅಕ್ಕಿ ಸಾಗಣೆ ಮಾಡುತ್ತಿದ್ದರು.

​ಖಚಿತ ಮಾಹಿತಿ ಮೇರೆಗೆ ಗಡಿಭಾಗದಲ್ಲಿ ದಾಳಿ ನಡೆಸಿದ ಪೊಲೀಸರು, ಅಕ್ಕಿ ಸಾಗಿಸಲು ಬಳಸುತ್ತಿದ್ದ 4 ಪಿಕಪ್ ವಾಹನಗಳು ಹಾಗೂ 1 ಲಾರಿಯನ್ನು ಜಪ್ತಿ ಮಾಡಿದ್ದಾರೆ.

​10 ಜನರ ವಿರುದ್ಧ ಎಫ್‌ಐಆರ್ ದಾಖಲು:

​ಅಕ್ರಮ ಅಕ್ಕಿ ದಂಧೆಯಲ್ಲಿ ಭಾಗಿಯಾಗಿದ್ದ ಗೋಪಾಲ್, ಮಹಮ್ಮದ್ ಅಲಿ, ಜನಾರ್ಧನ್, ಇಮಾಮ್ ಹಾಗೂ ವಿನೋದ್ ಕುಮಾರ್ ಸೇರಿದಂತೆ ಒಟ್ಟು 10 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳೆಲ್ಲರೂ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಯ ಮೂಲದವರೆಂದು ತಿಳಿದುಬಂದಿದೆ.

​ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು:

​ಬಡವರ ಹಸಿವು ನೀಗಿಸಬೇಕಾದ ಪಡಿತರ ಅಕ್ಕಿಯನ್ನು ಸ್ವಂತ ಲಾಭಕ್ಕಾಗಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸಿದ ಈ ಜಾಲದ ವಿರುದ್ಧ ಸಿರಿಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


Share News