Share News

ಬೆಂಗಳೂರು (ಸೆ. 05): ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದಲ್ಲಿ ಖಾಲಿ ಇರುವ ಅಧ್ಯಕ್ಷರ ಸ್ಥಾನಕ್ಕೆ ತಕ್ಷಣವೇ ನೂತನ ಅಧ್ಯಕ್ಷರನ್ನು ನೇಮಕ ಮಾಡುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಅವರು ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

​ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎನ್. ಕೆ. ಸುಧೀಂದ್ರ ರಾವ್ ಅವರ ಅಧಿಕಾರವಧಿಯು ಜುಲೈ 31ರಂದು ಪೂರ್ಣಗೊಂಡಿತ್ತು. ಪ್ರಸ್ತುತ ಅಧ್ಯಕ್ಷರ ಸ್ಥಾನ ಖಾಲಿಯಾಗಿ ಒಂದು ತಿಂಗಳು ಕಳೆದರೂ ನೂತನ ಅಧ್ಯಕ್ಷರ ನೇಮಕಾತಿಯಾಗಿಲ್ಲ.

​ಪ್ರಕರಣಗಳ ವಿಲೇವಾರಿಗೆ ಅಡಚಣೆ:

ಪ್ರಾಧಿಕಾರದಲ್ಲಿ ಈಗಾಗಲೇ ಹಲವಾರು ಪ್ರಮುಖ ದೂರುಗಳು ದಾಖಲಾಗಿವೆ. ಇದರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನಿರ್ದೇಶನಕ್ಕೊಳಪಟ್ಟ ಪ್ರಕರಣಗಳು ಹಾಗೂ ದೂರುದಾರರ ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಮುಖ ದೂರುಗಳು ಸೇರಿವೆ. ಹಲವು ಪ್ರಕರಣಗಳ ವಿಚಾರಣೆ ಪೂರ್ಣಗೊಂಡು ಅಂತಿಮ ವಿಲೇವಾರಿ ಹಂತದಲ್ಲಿದ್ದ ಸಂದರ್ಭದಲ್ಲೇ ಅಧ್ಯಕ್ಷರ ಹುದ್ದೆ ಖಾಲಿಯಾಗಿದೆ.

​ಅಧ್ಯಕ್ಷರಿಲ್ಲದೆ ಆಡಳಿತಾತ್ಮಕ ನಿರಂತರತೆಗೆ ಧಕ್ಕೆಯಾಗಿದ್ದು, ಪ್ರಕರಣಗಳ ತ್ವರಿತ ವಿಲೇವಾರಿಗೆ ಅಡಚಣೆ ಉಂಟಾಗಿದೆ. ಇದರಿಂದ ಸಾರ್ವಜನಿಕರು ಹಾಗೂ ದೂರುದಾರರ ಹಿತಾಸಕ್ತಿಯ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಪ್ರಾಧಿಕಾರದ ವಿಶ್ವಾಸಾರ್ಹತೆಗೆ ಧಕ್ಕೆಯಾಗುವ ಆತಂಕ ಎದುರಾಗಿದೆ.

​ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಬಾಕಿ ಇರುವ ದೂರುಗಳನ್ನು ತ್ವರಿತ ಗತಿಯಲ್ಲಿ ವಿಲೇವಾರಿ ಮಾಡಲು ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ತಕ್ಷಣವೇ ಹೊಸ ಅಧ್ಯಕ್ಷರನ್ನು ನೇಮಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮೋಹನ್ ಕುಮಾರ್ ದಾನಪ್ಪ ಪತ್ರದಲ್ಲಿ ಒತ್ತಾಯಿಸಿದ್ದಾರೆ.


Share News