ಬೆಳಗಾವಿ:ಮಾರಾಟಕ್ಕಾಗಿ ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ಬರೋಬ್ಬರಿ 14,000 ಲೀಟರ್ ಸ್ಪಿರಿಟ್ (ಮದ್ಯಸಾರ) ಅನ್ನು ಟ್ಯಾಂಕರ್ ಸಮೇತ ಅಬಕಾರಿ ಇಲಾಖೆಯ ಅಧಿಕಾರಿಗಳು ಖಾನಾಪುರ ತಾಲೂಕಿನ ಜಾಂಬೋಟಿ–ಕಣಕುಂಬಿ ರಸ್ತೆಯಲ್ಲಿ ಜಪ್ತಿ ಮಾಡಿದ್ದಾರೆ. ನಿನ್ನೆ ತಡರಾತ್ರಿ ಈ ಭರ್ಜರಿ ಬೇಟೆ ನಡೆದಿದ್ದು, ಒಟ್ಟು 35 ಲಕ್ಷಕ್ಕೂ ಅಧಿಕ ಮೌಲ್ಯದ ಮುದ್ದೇಮಾಲನ್ನು ವಶಪಡಿಸಿಕೊಳ್ಳಲಾಗಿದೆ.
ಮೇ 19ರಂದು ಬೆಳಗಿನ ಜಾವ ಸುಮಾರು 3:45ರ ವೇಳೆಗೆ ಜಾಂಬೋಟಿಯಿಂದ ಕಣಕುಂಬಿ ಕಡೆಗೆ ಸಂಶಯಾಸ್ಪದವಾಗಿ ತೆರಳುತ್ತಿದ್ದ ಟ್ಯಾಂಕರ್ ವಾಹನವನ್ನು ಹೊಂಚು ಹಾಕಿದ್ದ ಅಬಕಾರಿ ಅಧಿಕಾರಿಗಳ ತಂಡ ತಡೆದು ನಿಲ್ಲಿಸಿದೆ. ವಾಹನವನ್ನು ತೀವ್ರ ತಪಾಸಣೆಗೆ ಒಳಪಡಿಸಿದಾಗ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಅಕ್ರಮವಾಗಿ 14 ಸಾವಿರ ಲೀಟರ್ ಮದ್ಯಸಾರ (ಸ್ಪಿರಿಟ್) ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೆಗ್ಗಿನವಾಳ ನಿವಾಸಿಯಾದ ಟ್ಯಾಂಕರ್ ಚಾಲಕ ಸಿದ್ದರಾಜು ಪುಟ್ಟಸ್ವಾಮಿ ಶೆಟ್ಟಿ (47) ಎಂಬಾತನನ್ನು ಅಧಿಕಾರಿಗಳು ಬಂಧಿಸಿ, ಆತನ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ವೇಳೆ ಜಪ್ತಿ ಮಾಡಿದ ಒಟ್ಟು ಸ್ವತ್ತಿನ ಮೌಲ್ಯ ₹35,01,500 ಎಂದು ಅಂದಾಜಿಸಲಾಗಿದೆ. ಇದರ ವಿವರ ಈ ಕೆಳಗಿನಂತಿದೆ:
ಸ್ಪಿರಿಟ್ (ಮದ್ಯಸಾರ) ಮೌಲ್ಯ: ₹14,00,000
ಟ್ಯಾಂಕರ್ ವಾಹನದ ಮೌಲ್ಯ: ₹21,00,000
ಮೊಬೈಲ್ ಫೋನ್ ಮೌಲ್ಯ: ₹1,500
ಅಬಕಾರಿ ಇಲಾಖೆಯ ಕೇಂದ್ರ ಸ್ಥಾನದ ಅಪರ ಆಯುಕ್ತರಾದ ಡಾ. ವೈ. ಮಂಜುನಾಥ, ಬೆಳಗಾವಿ ವಿಭಾಗದ ಜಂಟಿ ಆಯುಕ್ತರಾದ ಎಫ್.ಎಚ್. ಚಲವಾದಿ, ಬೆಳಗಾವಿ ದಕ್ಷಿಣ ಜಿಲ್ಲೆಯ ಉಪ ಆಯುಕ್ತರಾದ ಜಗದೀಶ ಎನ್.ಕೆ. ಹಾಗೂ ಅಬಕಾರಿ ಅಧೀಕ್ಷಕರಾದ ವಿಜಯಕುಮಾರ ಜೆ. ಹಿರೇಮಠ ಅವರ ಪ್ರತ್ಯಕ್ಷ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಬೆಳಗಾವಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ರವಿ ಎಂ. ಮುರಗೋಡ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಅಬಕಾರಿ ನಿರೀಕ್ಷಕರಾದ ಮಂಜುನಾಥ ಮೆಳ್ಳಿಗೇರಿ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಅಬಕಾರಿ ಸಿಬ್ಬಂದಿಗಳಾದ ನೂರುಲ್ಲಾ ಖಾನ್, ಸುನೀಲ ಎಸ್. ಪಾಟೀಲ, ಮಂಜುನಾಥ ಬಳಗಪ್ಪನವರ, ವೈ.ಬಿ. ಪಾಟೀಲ, ಬಸವರಾಜ ವಿವೇಕಿ, ಪ್ರಕಾಶ ನಂದಿ ಹಾಗೂ ಇಲಾಖೆಯ ವಾಹನ ಚಾಲಕರು ಸಕ್ರಿಯವಾಗಿ ಪಾಲ್ಗೊಂಡಿದ್ದರು.