Share News

ಪಾವಗಡ: ಮಗಳ ಸಾವಿನಿಂದ ಕಂಗಾಲಾದ ತಂದೆಯೊಬ್ಬರು, ಅಳಿಯನ ನಿರ್ಮಾಣ ಹಂತದ ಮನೆಯ ನಡುಮನೆಯಲ್ಲೇ ಗುಂಡಿ ತೆಗೆದು ಮಗಳ ಮೃತದೇಹವನ್ನು ಹೂತಿಟ್ಟ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಭೂಪೂರು ತಾಂಡಾದಲ್ಲಿ ನಡೆದಿದೆ. ಈ ವಿಲಕ್ಷಣ ಘಟನೆಯಿಂದಾಗಿ ಗ್ರಾಮದಲ್ಲಿ ಕೆಲಕಾಲ ಭಾರೀ ಹೈಡ್ರಾಮಾ ಹಾಗೂ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಪಾವಗಡ ಮೂಲದ ಶೃತಿ ಎಂಬ ಗೃಹಿಣಿ ಇತ್ತೀಚೆಗೆ ಬೆಂಗಳೂರಿನ ಯಲಹಂಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಗಳ ಅಕಾಲಿಕ ಮರಣದಿಂದ ತೀವ್ರವಾಗಿ ನೊಂದ ತಂದೆ ರಾಜುನಾಯ್ಕ, ಮಗಳ ಸಾವಿಗೆ ಅಳಿಯ ಪವನ್ ಕಲ್ಯಾಣ್ ಕಾರಣ ಎಂದು ಆಕ್ರೋಶಗೊಂಡಿದ್ದರು ಎನ್ನಲಾಗಿದೆ.

ಅಳಿಯ ಪವನ್ ಕಲ್ಯಾಣ್ ಭೂಪೂರು ತಾಂಡಾದಲ್ಲಿ ಹೊಸ ಮನೆ ನಿರ್ಮಿಸುತ್ತಿದ್ದು, ಈ ಮನೆಗೆ ತಾನೇ ಹಣ ನೀಡಿದ್ದಾಗಿ ರಾಜುನಾಯ್ಕ ಹೇಳಿಕೊಂಡಿದ್ದಾರೆ. “ನನ್ನ ಮಗಳ ನೆನಪಿಗಾಗಿ ಅವಳ ಸಮಾಧಿಯನ್ನು ಈ ಮನೆಯಲ್ಲೇ ಮಾಡಿ ಸ್ಮಾರಕ ನಿರ್ಮಿಸುತ್ತೇನೆ” ಎಂದು ಪಟ್ಟು ಹಿಡಿದ ಅವರು, ಮನೆಯ ನಡುಮನೆಯಲ್ಲಿ ಹೊಸದಾಗಿ ಹಾಕಿದ್ದ ಟೈಲ್ಸ್‌ಗಳನ್ನು ಕಿತ್ತು ಗುಂಡಿ ತೋಡಿದ್ದಾರೆ. ಬಳಿಕ ಶೃತಿಯ ಮೃತದೇಹವನ್ನು ಮನೆಯ ಒಳಗೇ ಹೂತು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಮನೆಯೊಳಗೆ ಶವ ಹೂತಿರುವ ವಿಷಯ ತಿಳಿದ ಕೂಡಲೇ ತಿರುಮಣಿ ಪೊಲೀಸರು ಸ್ಥಳಕ್ಕೆ ಧಾವಿಸಿದರು. ವಾಸದ ಮನೆಯೊಳಗೆ ಶವ ಸಂಸ್ಕಾರ ಮಾಡುವುದು ಕಾನೂನುಬಾಹಿರ ಮತ್ತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅಸಮರ್ಪಕ ಎಂದು ಪೊಲೀಸರು ತಂದೆಗೆ ತಿಳಿಹೇಳಲು ಪ್ರಯತ್ನಿಸಿದರು.

​”ಮಗಳ ಮೇಲಿನ ಅತಿಯಾದ ಮಮಕಾರ ಹಾಗೂ ಅಳಿಯನ ಮೇಲಿನ ಆಕ್ರೋಶದಿಂದ ತಂದೆ ಈ ನಿರ್ಧಾರ ಕೈಗೊಂಡಿದ್ದರು. ಕಾನೂನು ರೀತಿ ಇದು ಸರಿಯಲ್ಲದ ಕಾರಣ ಅವರಿಗೆ ಮನವರಿಕೆ ಮಾಡಿಕೊಡಲಾಯಿತು,” ಎಂದು ಪೊಲೀಸ್ ಮೂಲಗಳು ತಿಳಿಸಿವೆ.

​ದೀರ್ಘಕಾಲದ ಚರ್ಚೆಯ ನಂತರ ಪೊಲೀಸರ ಮಾತಿಗೆ ಒಪ್ಪಿದ ರಾಜುನಾಯ್ಕ, ಮೃತದೇಹವನ್ನು ಹೊರತೆಗೆಯಲು ಸಮ್ಮತಿಸಿದರು. ಬಳಿಕ ಪೊಲೀಸರ ಸಮ್ಮುಖದಲ್ಲೇ ಮನೆಯೊಳಗಿದ್ದ ಶವವನ್ನು ಹೊರತೆಗೆದು, ಅಳಿಯನಿಗೆ ಸೇರಿದ ಜಮೀನಿನಲ್ಲಿ ಶಾಸ್ತ್ರೋಕ್ತವಾಗಿ ಮರು ಅಂತ್ಯಸಂಸ್ಕಾರ ಮಾಡಲಾಯಿತು.

​ಈ ಘಟನೆಯು ಪಾವಗಡ ಭಾಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮಗಳ ಮೇಲಿನ ತಂದೆಯ ಮಮಕಾರ ಮತ್ತು ಅಳಿಯನ ಮೇಲಿನ ಸಿಟ್ಟು ಎಂತಹ ವಿಲಕ್ಷಣ ಘಟನೆಗೆ ಕಾರಣವಾಗಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.

ವರದಿ :- ಗಿಲ್ಬರ್ಟ್. ಜೆ ಆರಕ್ಷಕರ ಟೈಮ್ಸ್ ಮೀಡಿಯಾ


Share News