ಉಡುಪಿ/ಕಾಪು: ಪೆಟ್ರೋಲ್ ಬಂಕ್ನಲ್ಲಿ ಡೀಸೆಲ್ ತುಂಬಿಸಿಕೊಂಡು, ಹಣ ಪಾವತಿಸದೆ ಸಿಬ್ಬಂದಿಗೆ ವಂಚಿಸಿ ಪರಾರಿಯಾಗಿದ್ದ ಮೂವರು ಅಂತರಜಿಲ್ಲಾ ಕಿಲಾಡಿಗಳನ್ನು ಶಿರ್ವ ಪೊಲೀಸರು ಬೆಂಗಳೂರಿನಲ್ಲಿ ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಫೋರ್ಡ್ ಇಕೋಸ್ಪೋರ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಜೂನ್ 27ರಂದು ರಾತ್ರಿ ಸುಮಾರು 9:10ರ ವೇಳೆಗೆ ಕಾರ್ಕಳ ತಾಲೂಕಿನ ಕುರ್ಕಾಲು ಗ್ರಾಮದ ಸುಭಾಸ್ ನಗರದಲ್ಲಿರುವ ಪೆಟ್ರೋಲ್ ಬಂಕ್ಗೆ ‘ಫೋರ್ಡ್ ಇಕೋಸ್ಪೋರ್ಟ್’ ಕಾರಿನಲ್ಲಿ (ನೊಂದಣಿ ಸಂಖ್ಯೆ: KA14-MB-8452) ಮೂವರು ಆರೋಪಿಗಳು ಬಂದಿದ್ದರು. ಕಾರಿಗೆ ₹4,711.09 ಮೌಲ್ಯದ ಡೀಸೆಲ್ ತುಂಬಿಸಿಕೊಂಡ ಬಳಿಕ, ಬಿಲ್ ಪಾವತಿಸಲು ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡುವಂತೆ ಸಿಬ್ಬಂದಿಗೆ ತಿಳಿಸಿದ್ದಾರೆ. ಹಣ ಪಾವತಿಸಿದಂತೆ ನಟಿಸಿ, ಸಿಬ್ಬಂದಿಯ ಗಮನ ಬೇರೆಡೆ ಸೆಳೆದು, ಯಾವುದೇ ಹಣ ನೀಡದೇ ಏಕಾಏಕಿ ಕಾರಿನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದರು.
ಈ ವಂಚನೆ ಕುರಿತು ಪೆಟ್ರೋಲ್ ಬಂಕ್ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS-2023) ಕಲಂ 316(2) ಹಾಗೂ 318(4) ಅಡಿಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಉಡುಪಿ ಜಿಲ್ಲಾ ಪೊಲೀಸ್ ದಲ, ಆರೋಪಿಗಳ ಪತ್ತೆಗೆ ಬಲೆ ಬೀಸಿತ್ತು. ಕಾರ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ (DySP) ವಿಜಯ ಪ್ರಸಾದ್ ಹಾಗೂ ಕಾಪು ವೃತ್ತ ನಿರೀಕ್ಷಕ (CPI) ಅಝಮತ್ ಅಲಿ ಅವರ ಮಾರ್ಗದರ್ಶನದಲ್ಲಿ, ಶಿರ್ವ ಠಾಣೆಯ ಉಪನಿರೀಕ್ಷಕ (PSI) ಮಂಜುನಾಥ ಮರಬದ ನೇತೃತ್ವದ ವಿಶೇಷ ಪೊಲೀಸ್ ತಂಡವು ತಾಂತ್ರಿಕ ಸೂಕ್ಷ್ಮ ಸುಳಿವುಗಳನ್ನಾಧರಿಸಿ ಬೆಂಗಳೂರಿನಲ್ಲಿ ಬೀಡುಬಿಟ್ಟು ಕಾರ್ಯಾಚರಣೆ ನಡೆಸಿ ಮೂವರನ್ನೂ ಬಂಧಿಸಿದೆ.
ಬಂಧಿತರನ್ನು ಕೋಟೆಕಾರ್ ನಿವಾಸಿ ಮಹಮ್ಮದ್ ರಿಯಾಜ್ (26), ಶಿರ್ವ ಭೂತಬೆಟ್ಟು ನಿವಾಸಿ ಮಹಮ್ಮದ್ ಅಫ್ರಾಜ್ (23) ಹಾಗೂ ಉಡುಪಿ ಅಂಬಾಗಿಲು ನಿವಾಸಿ ಆಶಿಲ್ (21) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಖದೀಮರು ರಾಜ್ಯದ ಇತರೆ ಭಾಗಗಳಲ್ಲೂ ಇದೇ ಮಾದರಿಯಲ್ಲಿ ಪೆಟ್ರೋಲ್ ಬಂಕ್ಗಳಿಗೆ ವಂಚಿಸಿದ್ದಾರೆಯೇ ಅಥವಾ ಬೇರೆ ಇಲಾಖೆಗಳ ವ್ಯಾಪ್ತಿಯಲ್ಲಿ ಇತರೆ ಯಾವುದಾದರೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಕುರಿತು ಶಿರ್ವ ಪೊಲೀಸರು ಸದ್ಯ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಅತ್ಯಂತ ಚಾಕಚಕ್ಯತೆಯಿಂದ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ ಶಿರ್ವ ಪೊಲೀಸ್ ತಂಡದ ದಕ್ಷ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.