ಕೋಝಿಕ್ಕೋಡ್ (ಕೇರಳ): ವಿಧಿ ಆಡಿದ ಕ್ರೂರ ಆಟಕ್ಕೆ ಸೌದಿ ಅರೇಬಿಯಾದ ಕತ್ತಲು ಜೈಲಿನಲ್ಲಿ ಮರಣದಂಡನೆ ಶಿಕ್ಷೆ ಎದುರಿಸುತ್ತಾ, ಕಳೆದ ಎರಡು ದಶಕಗಳಿಂದ ಸಾವಿನ ನೆರಳಿನಲ್ಲೇ ಕಾಲ ಕಳೆದಿದ್ದ ಭಾರತೀಯ ವ್ಯಕ್ತಿಯೊಬ್ಬರು ಕೊನೆಗೂ ಜೀವಂತವಾಗಿ ತಾಯ್ನಾಡಿಗೆ ಮರಳಿದ್ದಾರೆ! ಕೇರಳ ಮೂಲದ ಅಬ್ದುಲ್ ರಹೀಂ (44) ಎಂಬುವವರೇ ಜಗತ್ತಿನಾದ್ಯಂತದ ಸಾರ್ವಜನಿಕರು ಒಟ್ಟಾಗಿ ಸಂಗ್ರಹಿಸಿ ನೀಡಿದ ಬರೋಬ್ಬರಿ 34 ಕೋಟಿ ರೂಪಾಯಿ ‘ಬ್ಲಡ್ ಮನಿ’ (ಪರಿಹಾರ ಧನ) ನೆರವಿನಿಂದ ಮರಣದ ಹಾದಿಯಿಂದ ಮರಳಿ ಬಂದು ತಮ್ಮ ಕುಟುಂಬವನ್ನು ಸೇರಿಕೊಂಡಿದ್ದಾರೆ.
ಕೇರಳದಲ್ಲಿ ಆಟೋ ಮತ್ತು ಬಸ್ ಚಾಲಕನಾಗಿದ್ದ ಅಬ್ದುಲ್ ರಹೀಂ, ಕುಟುಂಬದ ಉತ್ತಮ ಭವಿಷ್ಯದ ಕನಸು ಹೊತ್ತು 2006ರಲ್ಲಿ ಸೌದಿ ಅರೇಬಿಯಾದ ರಿಯಾದ್ಗೆ ಚಾಲಕನ ಕೆಲಸಕ್ಕೆ ತೆರಳಿದ್ದರು. ಅಲ್ಲಿ ಅವರಿಗೆ ಮಾಲೀಕನ 17 ವರ್ಷದ ಮಗ ಫಯಾಸ್ನನ್ನು ನೋಡಿಕೊಳ್ಳುವ ಜವಾಬ್ದಾರಿ ಸಿಕ್ಕಿತ್ತು. ಆ ಹುಡುಗ ಪಾರ್ಶ್ವವಾಯು (Paralysis) ಪೀಡಿತನಾಗಿದ್ದು, ಕುತ್ತಿಗೆಗೆ ಅಳವಡಿಸಲಾಗಿದ್ದ ಕೃತಕ ಉಸಿರಾಟದ ಸಾಧನದ (Life Support) ಮೂಲಕ ಜೀವಿಸುತ್ತಿದ್ದನು.
ಒಂದು ದಿನ ಕಾರಿನಲ್ಲಿ ಹೋಗುತ್ತಿದ್ದಾಗ ಟ್ರಾಫಿಕ್ ಸಿಗ್ನಲ್ ದಾಟುವ ಗಲಾಟೆಯಲ್ಲಿ, ಆಕಸ್ಮಿಕವಾಗಿ ರಹೀಂ ಕೈ ತಗುಲಿ ಹುಡುಗನ ಕುತ್ತಿಗೆಯಲ್ಲಿದ್ದ ಉಸಿರಾಟದ ಉಪಕರಣ ಕಳಚಿ ಬಿದ್ದಿತ್ತು. ಕ್ಷಣಾರ್ಧದಲ್ಲೇ ಆ ಹುಡುಗ ಪ್ರಾಣ ಕಳೆದುಕೊಂಡಿದ್ದರಿಂದ, ರಹೀಂ ಅವರ ಮೇಲೆ ಕೊಲೆ ಆರೋಪ ಹೊರಿಸಲಾಗಿತ್ತು. ಸೌದಿ ನ್ಯಾಯಾಲಯವು ಸುದೀರ್ಘ ವಿಚಾರಣೆ ನಡೆಸಿ 2011ರಲ್ಲಿ ಅಬ್ದುಲ್ ರಹೀಂಗೆ ಮರಣದಂಡನೆ ಶಿಕ್ಷೆ ವಿಧಿಸಿತು.
ವರ್ಷಗಳು ಉರುಳಿದಂತೆ ರಹೀಂ ಬಿಡುಗಡೆಗಾಗಿ ಪ್ರಯತ್ನಗಳು ಮುಂದುವರಿದಿದ್ದವು. ಕೊನೆಗೆ ಮೃತ ಬಾಲಕನ ಕುಟುಂಬಸ್ಥರು, “₹34 ಕೋಟಿ ಬಿಡುಗಡೆ ಹಣ (Blood Money) ನೀಡಿದರೆ ನಾವು ಕ್ಷಮಿಸಲು ಸಿದ್ಧ” ಎಂಬ ಕಠಿಣ ಶರತ್ತು ವಿಧಿಸಿದರು. ಒಬ್ಬ ಸಾಮಾನ್ಯ ಚಾಲಕನ ಕುಟುಂಬಕ್ಕೆ ಇಷ್ಟೊಂದು ಭಾರಿ ಮೊತ್ತ ಹೊಂದಿಸುವುದು ಅಸಾಧ್ಯದ ಮಾತಾಗಿತ್ತು.
ಆದರೆ ರಹೀಂ ಜೀವ ಉಳಿಸಲು ಇಡೀ ಕೇರಳ ರಾಜ್ಯ ಮತ್ತು ಪ್ರಪಂಚದಾದ್ಯಂತ ಇದ್ದ ಅನಿವಾಸಿ ಭಾರತೀಯರು ಒಂದಾದರು. ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ನಿಧಿ ಸಂಗ್ರಹಣೆ (Crowdfunding) ಅಭಿಯಾನ ನಡೆಸಿ, ಕೇವಲ ಕೆಲವೇ ದಿನಗಳಲ್ಲಿ ಬರೋಬ್ಬರಿ 47 ಕೋಟಿ ರೂಪಾಯಿ ಸಂಗ್ರಹವಾಗಿ ಇತಿಹಾಸ ಸೃಷ್ಟಿಯಾಯಿತು!
ಸಂಗ್ರಹವಾದ ಹಣದಲ್ಲಿ ನಿಗದಿಪಡಿಸಿದ ₹34 ಕೋಟಿಯನ್ನು ಸೌದಿ ಕೋರ್ಟ್ ಮೂಲಕ ಸಂತ್ರಸ್ತ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಸೌದಿ ಆಡಳಿತವು ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ರಹೀಂರನ್ನು ಜೈಲಿನಿಂದ ಬಿಡುಗಡೆ ಮಾಡಿತು.
ಕೊನೆಗೂ ಸುದೀರ್ಘ 20 ವರ್ಷಗಳ ಅಗ್ನಿಪರೀಕ್ಷೆ ಮುಗಿಸಿ, ಪವಿತ್ರ ಬಕ್ರೀದ್ ಹಬ್ಬದ ಸುದಿನದಂದೇ ಅಬ್ದುಲ್ ರಹೀಂ ಕ್ಯಾಲಿಕಟ್ ಅಂತಾರಾಷ್ಟಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಕಣ್ಣೀರು ಹಾಕುತ್ತಾ ವೃದ್ಧ ತಾಯಿಯನ್ನು ಅಪ್ಪಿಕೊಂಡ ರಹೀಂ, “ನಾನು ಮತ್ತೆ ಜೀವಂತವಾಗಿ ಮರಳುತ್ತೇನೆ ಅಂದುಕೊಂಡಿರಲಿಲ್ಲ. ನನ್ನ ಜೀವ ಉಳಿಸಿದ ಪ್ರತಿಯೊಬ್ಬ ದೇವದೂತರಿಗೂ ಧನ್ಯವಾದಗಳು” ಎಂದು ಭಾವುಕರಾಗಿದ್ದಾರೆ. ಇಡೀ ದೇಶವೇ ಮೆಚ್ಚುವಂತಹ ಮಾನವೀಯತೆಗೆ ಈ ಘಟನೆ ಸಾಕ್ಷಿಯಾಗಿದೆ.