Share News

ತುಮಕೂರು: ಬಡ ರೋಗಿಗಳಿಗೆ ಉಚಿತವಾಗಿ ವಿತರಿಸಬೇಕಾದ ಸರ್ಕಾರಿ ಆಯುರ್ವೇದ ಔಷಧಿಗಳನ್ನು ಅಕ್ರಮವಾಗಿ ಮನೆಯಲ್ಲಿ ದಾಸ್ತಾನು ಮಾಡಿದ್ದ ಬೃಹತ್ ಜಾಲವೊಂದು ಜಿಲ್ಲೆಯ ಹುಳಿಯಾರಿನಲ್ಲಿ ಬೆಳಕಿಗೆ ಬಂದಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕು ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ ಸೇರಿದ ಔಷಧಿಗಳು ಡಿ-ದರ್ಜೆ ನೌಕರನ ಮನೆಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಹುಳಿಯಾರಿನ ಮನೆಯೊಂದರಲ್ಲಿ ಅಕ್ರಮವಾಗಿ ಔಷಧಿಗಳನ್ನು ಸಂಗ್ರಹಿಸಿಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ, ಸುಮಾರು 70 ಬಾಕ್ಸ್‌ಗಳಿಗೂ ಹೆಚ್ಚು ಸರ್ಕಾರಿ ಔಷಧಿಗಳು ಪತ್ತೆಯಾಗಿವೆ. ಇವು 2023, 2024 ಮತ್ತು 2025ನೇ ಸಾಲಿನ ಅವಧಿಯ ಔಷಧಿಗಳಾಗಿದ್ದು, ಚಿಕ್ಕನಾಯಕನಹಳ್ಳಿ ತಾಲ್ಲೂಕು ಆಸ್ಪತ್ರೆಯ ಡಿ-ದರ್ಜೆ ನೌಕರನ ಮನೆಯಲ್ಲಿ ಇರಿಸಲಾಗಿತ್ತು.

ಆಸ್ಪತ್ರೆಯ ದಾಖಲೆಗಳ ಪ್ರಕಾರ, ಈ ಎಲ್ಲಾ ಔಷಧಿಗಳನ್ನು ಈಗಾಗಲೇ ರೋಗಿಗಳಿಗೆ ಉಚಿತವಾಗಿ ವಿತರಿಸಲಾಗಿದೆ ಎಂದು ವೈದ್ಯರು ಆಡಿಟ್ ವರದಿಯಲ್ಲಿ ನಮೂದಿಸಿದ್ದಾರೆ. ಅಂದರೆ, ಕಡತಗಳಲ್ಲಿ ಔಷಧಿಗಳು ಖಾಲಿಯಾಗಿವೆ ಎಂದು ತೋರಿಸಿ, ವಾಸ್ತವದಲ್ಲಿ ಅವುಗಳನ್ನು ಗುಟ್ಟಾಗಿ ಮನೆಯಲ್ಲಿ ದಾಸ್ತಾನು ಮಾಡಿರುವುದು ಬಯಲಾಗಿದೆ. ಇದು ವ್ಯವಸ್ಥಿತವಾಗಿ ನಡೆಯುತ್ತಿರುವ ಕಾಳಸಂತೆಯ ಮಾರಾಟ ಜಾಲವಿರಬಹುದು ಎಂದು ಶಂಕಿಸಲಾಗಿದೆ.

ಈ ಕುರಿತು ಆಸ್ಪತ್ರೆಯ ವೈದ್ಯರನ್ನು ಪ್ರಶ್ನಿಸಿದಾಗ, “ಮುಂದಿನ ದಿನಗಳಲ್ಲಿ ನಡೆಸಲಿರುವ ವೈದ್ಯಕೀಯ ಕ್ಯಾಂಪ್‌ಗಳಿಗಾಗಿ ಈ ಔಷಧಿಗಳನ್ನು ಸಂಗ್ರಹಿಸಿಡಲಾಗಿತ್ತು” ಎಂಬ ಕುಂಟು ನೆಪ ನೀಡುತ್ತಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಇಡಬೇಕಾದ ಸರ್ಕಾರಿ ಸೊತ್ತನ್ನು ನೌಕರನ ಮನೆಯಲ್ಲಿ ಇಟ್ಟಿದ್ದು ಏಕೆ? ಮತ್ತು ಆಡಿಟ್ ವರದಿಯಲ್ಲಿ ‘ವಿತರಿಸಲಾಗಿದೆ’ ಎಂದು ಸುಳ್ಳು ಮಾಹಿತಿ ನೀಡಿದ್ದು ಏಕೆ? ಎಂಬ ಪ್ರಶ್ನೆಗಳಿಗೆ ಅಧಿಕಾರಿಗಳ ಬಳಿ ಉತ್ತರವಿಲ್ಲ.

​ಬಡವರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಈ ದಂಧೆಯ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಈ ಕೂಡಲೇ ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ.

 


Share News